ಬಾಗಲಕೋಟೆ: ರೈತರಿಗೆ ನೀಡುವ ಸಾಲ ಮನ್ನಾ ಹಾಗೂ ಇತರ ಸೌಲಭ್ಯಗಳ ಮಾದರಿಯಲ್ಲಿಯೇ ನೇಕಾರರಿಗೂ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘಟನೆ ವತಿಯಿಂದ ಜಮಖಂಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ವಿವಿಧ ಪ್ರದೇಶಗಳಿಂದ ಆಗಮಿಸಿದ ನೇಕಾರರು ಮಿನಿ ವಿಧಾನಸೌಧಕ್ಕೆ ಆಗಮಿಸಿ ಉಪ ವಿಭಾಗಾಧಿಕಾರಿಗೆ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಲಿಂಗ ಟರಕಿ ಮಾತನಾಡಿ, ರಾಜ್ಯದಲ್ಲಿ ರೈತರು ಹಾಗೂ ನೇಕಾರರು ಎರಡು ಕಣ್ಣುಗಳಿದ್ದಂತೆ. ರೈತರಿಗೆ ನೀಡಿರುವ ಪ್ರೋತ್ಸಾಹ, ಸಹಕಾರ, ಸಹಾಯವನ್ನು ನೇಕಾರರಿಗೂ ಸರ್ಕಾರ ನೀಡಬೇಕಾಗಿದೆ. ಈಗಾಗಲೇ ರಾಜ್ಯದ್ಯಂತ 54 ಲಕ್ಷ ನೇಕಾರರು ಇದ್ದಾರೆ.
ಇದರಲ್ಲಿ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ 2 ಸಾವಿರ ರೂ. ಹಾಗೂ ಒಮ್ಮೆ ಮಾತ್ರ ಎರಡು ಸಾವಿರ ರೂ. ಪರಿಹಾರ ನೀಡುವುದಾಗಿ ಆದೇಶಿಸಲಾಗಿದೆ. ಆದರೆ, ಇದರಿಂದ ನೇಕಾರರಿಗೆ ಅನುಕೂಲವಾಗುವುದಿಲ್ಲ. ರೈತರಿಗೆ ಕೊಡುವ ಸೌಲಭ್ಯವನ್ನು ನೇಕಾರರಿಗೆ ನೀಡಬೇಕು, ಇಲ್ಲವಾದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.