ಬಾಗಲಕೋಟೆ: ಜಿಲ್ಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ವಸತಿ ನಿಲಯದ ಸಮಸ್ಯೆ ಹಾಗೂ ಬಯಲು ಮುಕ್ತ ಶೌಚಾಲಯ ಬಗ್ಗೆ ತೀವ್ರ ಚರ್ಚೆ ನಡೆಯಿತು.
ಹಿಂದುಳಿದ ಜನಾಂಗದ ವಸತಿ ನಿಲಯದಲ್ಲಿ ಬೇಡಿಕೆ ಹೆಚ್ಚಾಗಿದ್ದು, 500 ವಿದ್ಯಾರ್ಥಿಗಳ ಭರ್ತಿಗೆ 6 ಸಾವಿರ ಅರ್ಜಿಗಳು ಬಂದಿದೆ. ಇದರಿಂದ ಉಳಿದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಲ್ಲಿ ₹ 1500 ಹಣ ನೀಡುವಂತೆ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಯಲು ಮುಕ್ತ ಶೌಚಾಲಯದಲ್ಲಿ ಯಶಸ್ಸು ಕಂಡಿರುವ ಬಾಗಲಕೋಟೆಗೆ ಕೇಂದ್ರದಿಂದ ಪ್ರಶಸ್ತಿಯನ್ನೂ ಪಡೆದಿದೆ ಎಂದು ಸಿಇಒ ಗಂಗೂಬಾಯಿ ಮಾನಕರ್ ತಿಳಿಸಿದಾಗ, ವಿಧಾನ ಪರಿಷತ್ ಸದಸ್ಯ ಆರ್ ಬಿ ತಿಮ್ಮಾಪೂರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಂಸದ ಪಿ ಸಿ ಗದ್ದಿಗೌಡರ ಹಾಗೂ ತಿಮ್ಮಾಪೂರ ನಡುವೆ ಮಾತಿನ ಚಕಮಕಿ ನಡೆಯಿತು.
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ಯೋಜನೆಯ ಬಯಲು ಮುಕ್ತ ಶೌಚಾಲಯ ಸಾಕಷ್ಟು ಸಾಧನೆ ಮಾಡಿದೆ. ಇದಕ್ಕೆ ಅಂಕಿ-ಸಂಖ್ಯೆಗಳ ದಾಖಲೆ ಇದೆ ಎಂದು ಸಂಸದರು ಹೇಳಿದಾಗ, ಇವು ಬರೀ ಕಾಗದದಲ್ಲಿ ಮಾತ್ರ. ಸುಳ್ಳು ಮಾಹಿತಿ ನೀಡಿಬೇಡಿ. ಗ್ರಾಮೀಣ ಭಾಗದಲ್ಲಿ ಶೌಚಾಲಯ ಕಟ್ಟಿಸಿಕೊಂಡರೂ ಉಪಯೋಗ ಆಗುತ್ತಿಲ್ಲ. ಬೇಕಾದರೆ ನಾಳೆಯೇ ಒಂದು ಗ್ರಾಮಕ್ಕೆ ಎಲ್ಲರೂ ಭೇಟಿ ನೀಡಿ ಪರಿಶೀಲಿಸೋಣ ಎಂದು ಸಂಸದರಿಗೆ ಹಾಗೂ ಸಿಇಒಗೆ ಸವಾಲು ಹಾಕಿದರು. ಆಗ ಗದ್ದಿಗೌಡರ ಕಾಂಗ್ರೆಸ್ ಅವಧಿಯಲ್ಲಿಯೇ ಸರಿಯಾದ ಕಾಮಗಾರಿ ಆಗಿಲ್ಲ ಎಂದು ಟಾಂಗ್ ನೀಡಲು ಮುಂದಾದಾಗ ಮತ್ತೆ ಮಾತಿನ ಚಕಮಕಿ ನಡೆಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ಪ್ರವಾಹದಿಂದ ಸುಮಾರು ₹ 645 ಕಿಲೋಮೀಟರ್ ರಸ್ತೆ ಹಾಳಾಗಿದ್ದು, ಪುನರ್ ನಿರ್ಮಾಣಕ್ಕೆ ₹ 200 ಕೋಟಿ ಬೇಕು. ಇದಕ್ಕೆ ಸಂಘ ಸಂಸ್ಥೆಗಳು ಹಣ ನೀಡುವುದಾಗಿ ತಿಳಿಸಿವೆ ಎಂದರು. ಜೆಡಿಎಸ್ ಸಹವಾಸ ಮಾಡಿದ್ದಕ್ಕೆ ಮೈಸೂರು ಬಿಟ್ಟು ಬಾಗಲಕೋಟೆಗೆ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ಗೆ ಪ್ರತಿಕ್ರಿಯಿಸಿದರು.