ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದ ಪ್ರದೇಶದಲ್ಲಿನ ಪುರ್ನವಸತಿ ಕಲ್ಪಿಸುವ ಸರ್ಕಾರದ ಕಾರ್ಯವನ್ನು ವಿರೋಧಿಸಿ ಜೈನ್ ಮುನಿಕುಲರತ್ನ ಭೂಷಣ ಮಹಾರಾಜ್ ನೇತೃತ್ವದಲ್ಲಿ ಶಾಸಕ ಸಿದ್ದು ಸವದಿಯವರ ಮನೆ ಮುಂದೆ ಪ್ರತಿಭಟನೆ ನಡೆಸಿದರು.
ಪರಿಸರ ನಾಶ ಮಾಡುವ ಕೆಲಸ ಮಾಡುವುದು ಸರಿಯಲ್ಲ. 58 ಎಕರೆಯಲ್ಲಿ ಪುನರ್ ವಸತಿ ಮಾಡುವುದು ಸರಿಯಲ್ಲ. ಹಳಿಂಗಳಿ ಸರ್ವೇ ನಂಬರ್ 142/ಎ. ಯಲ್ಲಿ ಒಟ್ಟು 336 ಎಕರೆ ಕಂದಾಯ ಇಲಾಖೆಯ ಜಾಗವಿದೆ. ಇಲ್ಲಿ 272 ಜೈನ ಮೂರ್ತಿಗಳ ಚಿಕ್ಕ ಚಿಕ್ಕ ದೇವಾಲಯಗಳ ಗುಂಪುಗಳಿವೆ. ಪ್ರಾಚೀನ ಕಾಲದ ಜೈನ ಧರ್ಮದ ಕುರುಹುಗಳಿರುವುದರಿಂದ ಇಲ್ಲಿ ಪುನರ್ವಸತಿ ಕೇಂದ್ರ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬದುಕಿ- ಬದುಕಲು ಬೀಡಿ ಎಂಬುದು ನಮ್ಮ ಧರ್ಮದ ಉದ್ದೇಶ. ಧರ್ಮದ ಉದ್ದೇಶ ಹಾಗೂ ಇತಿಹಾಸ ಉಳಿಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಭದ್ರಗಿರಿ ಬೆಟ್ಟದಲ್ಲಿ ಅಧಿಕಾರಿಗಳು ಸರ್ವೆ ಕಾರ್ಯ ಮಾಡುತ್ತಿದ್ದಾರೆ. ತಕ್ಷಣವೇ ಸರ್ಕಾರ ಈ ಯೋಜನೆ ನಿಲ್ಲಿಸಬೇಕು ಇಲ್ಲವಾದಲ್ಲಿ ಉಪವಾಸ ಮಾಡುವ ಮೂಲಕ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.