ಬಾಗಲಕೋಟೆ : ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಹಾಗೂ ಡಿಕೆಶಿ ಅವರು ಅಸ್ಪೃಶ್ಯರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಮಾದಿಗ ಮಹಾಸಭಾ ವತಿಯಿಂದ ಮುಧೋಳ ಪಟ್ಟಣದಲ್ಲಿ ಡಿಕೆಶಿ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾದಿಗ ಮಹಾಸಭಾ ಮುಖಂಡರು ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಮತ ಬ್ಯಾಂಕ್ ಆಗಿ ಸಮಾಜದವರನ್ನು ಬಳಸಿಕೊಳ್ತೀರಿ. ಆದರೆ, ಯಾವುದೇ ಸೌಲಭ್ಯ ನೀಡುವುದಿಲ್ಲ. ಪಕ್ಷದ ಪದಾಧಿಕಾರಿಗಳು ಸೇರಿದಂತೆ ಇತರ ಹುದ್ದೆಗಳನ್ನ ನೀಡುವುದಿಲ್ಲ.
ಕೇವಲ ಮತಕ್ಕಾಗಿ ಮಾತ್ರ ನಮ್ಮ ಸಮಾಜ ಸೀಮಿತವಾಗಿದೆ. ಮಾದಿಗ ಮೀಸಲಾತಿ ಹೋರಾಟದ ಬಗ್ಗೆ ನಿಮ್ಮ ನಿಲುವು ಏನು? ಈ ಬಗ್ಗೆ ನೀವು ಸ್ಪಷ್ಟಪಡಿಸಬೇಕು ಎಂದು ಡಿ ಕೆ ಶಿವಕುಮಾರ್ ಅವರನ್ನು ಕೇಳಿದ್ರು.
ಈ ಸಂದರ್ಭದಲ್ಲಿ ಡಿಕೆಶಿ ಮಾತನಾಡಿ, ನಾನು ಯಾವುದೇ ಜಾತಿ, ಪಂಗಡ ಮಾಡಲ್ಲ. ಮೀಸಲಾತಿ ಸಿಗಬೇಕು ಎಂಬುದು ನಮ್ಮ ವಾದವಾಗಿದೆ. ನೀವು ಕಾಂಗ್ರೆಸ್ ಪಕ್ಷದವರು, ನಿಮಗೆ ಎಲ್ಲಾ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎಲ್ಲಾ ಜಾತಿಯನ್ನು ಸಮಾನವಾಗಿ ಕಂಡು ಸೌಲಭ್ಯ ನೀಡಲಾಗುವುದು ಎಂದು ಭರವಸೆ ನೀಡಿದರು.