ಬಾಗಲಕೋಟೆ : ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಪ್ಪು ಶಿಲೀಂದ್ರ ರೋಗವು ಹರಡುತ್ತಿದೆ. ಈಗಾಗಲೇ ಈ ರೋಗಕ್ಕೆ ಒರ್ವ ಮಹಿಳೆ ಮೃತ ಪಟ್ಟಿದ್ದಾಳೆ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ನಿಂದಾಗಿ ಜನವಾಡ ಗ್ರಾಮದ 60 ವರ್ಷದ ಮಹಿಳೆ ಮೃತ ಪಟ್ಟಿದ್ದಾಳೆ. ಮೊದಲು ಜಮಖಂಡಿ ಪಟ್ಟಣದಲ್ಲಿ ಚಿಕಿತ್ಸೆ ನೀಡಲಾಗಿದೆ. ನಂತರ ಹುಬ್ಬಳ್ಳಿ ಕಿಮ್ಸ್ನಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಕಂಕನವಾಡಿ, ಶೂರ್ಪಾಲಿ, ತೊದಲಬಾಗಿ, ಜನವಾಡ ಸೇರಿದಂತೆ ಇತರ ಗ್ರಾಮದಲ್ಲಿ ತಲಾ ಒಬ್ಬರಿಗೆ ಕಪ್ಪು ಶಿಲೀಂದ್ರ ಲಕ್ಷಣಗಳು ಇವೆ. ಕೊರೊನಾ ರೋಗ ಸೇರಿದಂತೆ ಬ್ಲ್ಯಾಕ್ ಫಂಗಸ್ ಬಗ್ಗೆ ಜಿಲ್ಲಾಡಳಿತ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ.
ಸರ್ಕಾರ ಈ ಬಗ್ಗೆ ಎಚ್ಚರ ವಹಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಸಾವು-ನೋವು ಹೆಚ್ಚಾಗಲಿದೆ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಎಚ್ಚರಿಕೆ ನೀಡಿದರು.