ಬಾಗಲಕೋಟೆ : ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ಸ್ವಾಗತ. ಆದರೆ ಸೇರ್ಪಡೆಯನ್ನು ಪಕ್ಷ ತೀರ್ಮಾನಿಸುತ್ತೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ. ನಗರದಲ್ಲಿಂದು ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕಾರಣ ನಿಂತ ನೀರಲ್ಲ, ಬಹಳ ಫಾಸ್ಟ್ ಚೇಂಜಿಂಗ್ ರಾಜಕಾರಣದಲ್ಲಿರುವುದು. ಚುನಾವಣೆ ಸಂದರ್ಭದಲ್ಲಿ ತಮ್ಮ ಭವಿಷ್ಯ ಕಟ್ಟಿಕೊಳ್ಳೋಕೆ ಪಕ್ಷಾಂತರ ನಡೆಯುತ್ತೆ ಎಂದು, ಆಯನೂರ ಮಂಜುನಾಥ, ಸೋಮಶೇಖರ್ ಬಂದಿದ್ದಾರೆ ಅಂತ ಕೆಲವರು ಹೇಳ್ತಿದ್ದಾರೆ. ಈ ಪಕ್ಷದಿಂದ ಆ ಪಕ್ಷಕ್ಕೆ ಬರೋರು, ಹೋಗೋರು ಇದ್ದೇ ಇರ್ತಾರೆ ಎಂದರು.
ಇನ್ನು, ಶಿವಮೊಗ್ಗದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಪಕ್ಷಕ್ಕೆ ಸೇರಿಸಿಕೊಳ್ಳೋಕೆ ನಾವು ಎಲ್ಲಾ ರೀತಿಯಿಂದಲೂ ವಿಚಾರ ಮಾಡುತ್ತೇವೆ ಎಂದ ಸಚಿವರು, ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಅವರ ಅಭಿಪ್ರಾಯ ಕೇಳಿ ಪಕ್ಷ ಮುಂದುವರೆಯುತ್ತೆ. ಯಾರನ್ನಾದ್ರೂ ಪಕ್ಷಕ್ಕೆ ಸೇರಿಸಿಕೊಂಡ್ರೆ ನಮ್ಮ ಪಕ್ಷದಲ್ಲಿರುವ ನಿಷ್ಠಾವಂತರಿಗೆ ತೊಂದರೆ ಆಗಬಾರದು ಎಂದು ಹೇಳಿದರು.
ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವವರನ್ನ ಹಿಡಿದಿಟ್ಟುಕೊಳ್ಳಲು ಆಪರೇಶನ್ ಹಸ್ತದ ತಂತ್ರ ಏನು? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾಂಗ್ರೆಸ್ ಪಕ್ಷವನ್ನು ಯಾರೂ ಬಿಟ್ಟುಹೋಗ್ತಿಲ್ಲ, ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಅಧಿಕಾರದಲ್ಲಿದ್ದಾಗ ಯಾರೂ ಬಿಟ್ಟು ಹೋಗೋದಿಲ್ಲ. ಇದೆಲ್ಲ ವದಂತಿ ಎಂದು ಸ್ಪಷ್ಟಪಡಿಸಿದರು.
ಅವರಾಗಿಯೇ ಬಂದರೆ ಸ್ವಾಗತಿಸುತ್ತೇವೆ: ಇನ್ನೊಂದೆಡೆ "ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ. ನಮ್ಮ ಪಕ್ಷದ ವರ್ಚಸ್ಸು ಮತ್ತು ಸಿದ್ಧಾಂತವನ್ನು ಒಪ್ಪಿ ಬಿಜೆಪಿ, ಜೆಡಿಎಸ್ ನಾಯಕರುಗಳು ಅವರಾಗಿಯೇ ಬರುತ್ತೇವೆ ಎನ್ನುತ್ತಿದ್ದಾರೆ. ಹಾಗೆ ಬರುವವರಿಗೆ ನಮ್ಮ ಸ್ವಾಗತ" ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಮೈಸೂರಿನಲ್ಲಿ ಹೇಳಿದ್ದಾರೆ.
ಗೃಹ ಲಕ್ಷ್ಮಿ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಇಂದು ಆಗಮಿಸಿದ ಡಿ ಕೆ ಶಿವಕುಮಾರ್, ಮೈಸೂರಿನ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದರು.
"ನಾವಾಗಿಯೇ ಯಾರನ್ನೂ ಕರೆತರುವ ಪ್ರಯತ್ನ ಮಾಡುತ್ತಿಲ್ಲ. ಅವರ ಭವಿಷ್ಯದ ದೃಷ್ಟಿಯಿಂದ ನಮ್ಮ ಪಕ್ಷದ ವರ್ಚಸ್ಸನ್ನು ಅವರೇ ನಿರ್ಧರಿಸುತ್ತಿದ್ದಾರೆ. ಎಷ್ಟು ಜನ ಬರುತ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಮಯ, ಕಾಲ, ಘಳಿಗೆ ಎಂಬುದಿದೆ. ಆ ಘಳಿಗೆ ಬಂದಾಗ ಎಲ್ಲವೂ ನಡೆಯುತ್ತದೆ" ಎಂದು ಸೂಚ್ಯವಾಗಿ ತಿಳಿಸಿದರು. ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂಬ ವಿಚಾರಕ್ಕೆ, "ಇಂತಹ ಮಾತುಗಳನ್ನು ನಾನು ಹೇಳುತ್ತಾ ಹೋದರೆ ಅದು ಬಹಳ ದೊಡ್ಡದಾಗುತ್ತದೆ. ಈಗ ಅದರ ಬಗ್ಗೆ ಚರ್ಚೆ ಬೇಡ" ಎಂದರು.
ಗೃಹ ಲಕ್ಷ್ಮಿ ಯೋಜನೆ ಕಾರ್ಯಕ್ರಮ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್ ಆಗಿರುವ ವಿಚಾರಕ್ಕೆ, "ಯೋಜನೆ ಮೈಸೂರಿಗೆ ಶಿಫ್ಟ್ ಆಗಿರುವುದರ ಹಿಂದೆ ಯಾವುದೇ ರಾಜಕೀಯ ಇಲ್ಲ. ಬೆಳಗಾವಿಯಲ್ಲಿ ಇನ್ನೊಂದು ಕಾರ್ಯಕ್ರಮ ಮಾಡಲು ಪ್ಲಾನ್ ಮಾಡಿದ್ದೇವೆ. ಇದು ಒಮ್ಮತದ ತೀರ್ಮಾನ" ಎಂದು ತಿಳಿಸಿದರು.
ಇದನ್ನೂ ಓದಿ: ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ, ಅವರಾಗಿಯೇ ಬಂದರೆ ಸ್ವಾಗತಿಸುತ್ತೇವೆ: ಡಿಸಿಎಂ ಡಿ. ಕೆ ಶಿವಕುಮಾರ್