ಬಾಗಲಕೋಟೆ: ಜಿಲ್ಲೆಯಲ್ಲಿ ಚಿತ್ರಕಲೆ, ಗೋಡೆ ಬರಹ ಹಾಗೂ ನಾಮಫಲಕ ಬರೆದು ಜೀವನ ಸಾಗಿಸುತ್ತಿರುವ ಕಲಾವಿದರು ಕೋವಿಡ್ನಿಂದ ಅಕ್ಷರಶಃ ಪರದಾಡುತ್ತಿದ್ದಾರೆ. ಜಿಲ್ಲೆಯ ನವನಗರದಲ್ಲಿರುವ ಕೆ. ಮಲ್ಲು ಹಾಗೂ ಡಿ. ನೀಲ್ಲಪ್ಪ ಎಂಬುವವರು ಕಳೆದ 20 ವರ್ಷಗಳಿಂದಲೂ ಇಂತಹ ಕಲೆ ನಂಬಿ, ಜೀವನ ಸಾಗಿಸುತ್ತಿದ್ದಾರೆ. ಇವರೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರ್ಕಾರಿ ಕಚೇರಿಯ ನಾಮಫಲಕ ಶಾಲಾ - ಕಾಲೇಜುಗಳಲ್ಲಿ ಚಿತ್ರ ಬಿಡಿಸುವುದು ಹಾಗೂ ಅಂಗಡಿಗಳ ಮೇಲೆ ನಾಮಫಲಕ ಬರೆದು ಜೀವನ ಸಾಗಿಸುತ್ತಿದ್ದರು. ಆದರೆ, ಲಾಕ್ಡೌನ್ ಆದ ಬಳಿಕ ಯಾರೂ ಕೆಲಸ ಮಾಡಿಸದ ಕಾರಣ ಇವರ ಉಪಜೀವನಕ್ಕೆ ತೊಂದರೆ ಉಂಟಾಗಿದೆ.
ಸಾಲ - ಸೂಲ ಮಾಡುವ ಸ್ಥಿತಿ: ಲೇಬರ್ ಕಾರ್ಡ್ ಇಲ್ಲದ ಕಾರಣ, ಆಹಾರ ಧಾನ್ಯಗಳ ಕಿಟ್ ಬಂದಿಲ್ಲ. ಸರ್ಕಾರದಿಂದ ಸಿಗಬೇಕಾದ ಪರಿಹಾರ ಧನ ಬಂದಿಲ್ಲ. ಅನ್ನಭಾಗ್ಯ ಯೋಜನೆಯಲ್ಲಿ ಬರುವ ಆಹಾರಧಾನ್ಯದಿಂದಲೇ ಜೀವನ ಸಾಗಿಸಿದ್ದಾರೆ. ಸಾಲ - ಸೂಲ ಮಾಡಿಕೊಂಡು, ಜೀವನ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಅಲ್ಲದೇ ಇಡೀ ರಾಜ್ಯದಲ್ಲಿ ಸಾವಿರಾರು ಕುಟುಂಬದವರು ಇಂತಹ ಕಲೆಯನ್ನು ನಂಬಿ ಉಪ ಜೀವನ ಸಾಗಿಸುತ್ತಿದ್ದಾರೆ. ಆದರೆ, ಕೋವಿಡ್ನಿಂದ ಇವರ ಬದುಕನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ.
ಜೀವನಕ್ಕೆ ದಾರಿ ಮಾಡಿಕೊಡುವಂತೆ ಮನವಿ : ಪ್ರತಿ ತಿಂಗಳು ನಾಲ್ಕು ಸಾವಿರ ರೂಪಾಯಿಗಳ ಆದಾಯ ಬರುತ್ತದೆ. ಕೋವಿಡ್ನಿಂದ ಆದಾಯ ಇಲ್ಲದೇ ಉಪ ಜೀವನ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ, ಸರ್ಕಾರ ಲೇಬರ್ ಕಾರ್ಡ್ ಇಲ್ಲದೇ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಹಾಗೂ ಪರಿಹಾರ ನೀಡುವ ಮೂಲಕ ಪೇಂಟಿಂಗ್ ಮಾಡುವವರ ಜೀವನಕ್ಕೆ ದಾರಿ ಮಾಡಿಕೊಡಬೇಕು ಎಂದು ಕೆ.ಮಲ್ಲು ವಿನಂತಿಸಿಕೊಂಡಿದ್ದಾರೆ.
ಓದಿ: ಆನಂದ್ ಸಿಂಗ್ಗೆ ಸಿಎಂ ಬುಲಾವ್: ಚರ್ಚೆ ಬಳಿಕ ಹೈಕಮಾಂಡ್ ಜೊತೆ ಮಾತುಕತೆ ಎಂದ ಬೊಮ್ಮಾಯಿ