ಬಾಗಲಕೋಟೆ: ಅಂಗನವಾಡಿ ಕೇಂದ್ರದ ಮೂಲಕ ಸರ್ಕಾರ ಕೊಡುವ ಮೊಟ್ಟೆಯನ್ನು ಫಲಾನುಭವಿಗಳಿಗೆ ಕೊಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಹೆಚ್.ವಿ.ಶಿವಶಂಕರ ತಿಳಿಸಿದ್ದಾರೆ.
ಅವರು ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜಿಲ್ಲೆಯ ಒಂಭತ್ತು ತಾಲೂಕಿನಲ್ಲಿ ಸುಮಾರು 45 ಸಂಸ್ಥೆಗಳಿಗೆ ಸಂಚಾರ ಮಾಡಿ ಬಂದಿದ್ದೇವೆ. ಇದರಲ್ಲಿ ಅಂಗನವಾಡಿ, ನ್ಯಾಯಬೆಲೆ ಅಂಗಡಿ, ವಸತಿ ನಿಲಯ, ಗೋಡೌನ್ ಸೇರಿದಂತೆ ವೃದ್ಧಾಶ್ರಮಗಳಿಗೂ ಭೇಟಿ ನೀಡಿ, ಆಹಾರದ ಪೂರೈಕೆ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಆದರೆ ಅಂಗನವಾಡಿ ಕೇಂದ್ರದಲ್ಲಿ ಮೊಟ್ಟೆ ಕೊಡುವ ಬಗ್ಗೆ ಆರೋಪ ಕೇಳಿ ಬರುತ್ತಿದೆ ಎಂದರು.
ಸರ್ಕಾರ ಒಂದು ಮೊಟ್ಟೆಗೆ ಐದು ರೂಪಾಯಿಯಂತೆ ದರ ನೀಡಿದೆ. ಮಾರುಕಟ್ಟೆಯಲ್ಲಿ 6ರಿಂದ 7 ರೂಪಾಯಿವರೆಗೆ ದರ ಇರುವುದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆದು 5ರಿಂದ 7 ರೂಪಾಯಿಗೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಕಳಪೆ ಆಹಾರ ಧಾನ್ಯ ವಿತರಣೆ ಹಾಗೂ ಗುಣಮಟ್ಟ ಇಲ್ಲದ ಆಹಾರ ಸಾಮಗ್ರಿಗಳನ್ನು ಪೂರೈಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಅಧಿಕಾರಿಗಳು ಕ್ರಮ ಜರುಗಿಸದೆ ಇದ್ದಲ್ಲಿ ರಾಜ್ಯ ಮಟ್ಟದ ಆಯುಕ್ತರ ಗಮನಕ್ಕೆ ತಂದು ಕ್ರಮ ಜರುಗಿಸುವಂತೆ ಮಾಡಲಾಗುವುದು. ದೇಶದಲ್ಲಿ ರಾಷ್ಟ್ರೀಯ ಕಾಯ್ದೆ ಭದ್ರತೆ ಬಂದ ನಂತರ ಬಡವ, ಶ್ರೀಮಂತ ಎನ್ನದೆ ಪ್ರತಿಯೊಬ್ಬರಿಗೂ ಆಹಾರ ತಲುಪುಬೇಕು. ಈಗ ಕಲ್ಯಾಣ ಕಾರ್ಯಕ್ರಮ ಆಗಿಲ್ಲ. ಆಹಾರ ಸಿಗುವುದು ಪ್ರತಿಯೊಬ್ಬರ ಹಕ್ಕಾಗಿದೆ ಎಂದರು.
ಈಗಾಗಲೇ ರಾಜ್ಯದ 29 ಜಿಲ್ಲೆಯಲ್ಲಿ ಸಂಚಾರ ಮಾಡಿ, ಎಲ್ಲಾ ಮಾಹಿತಿಯನ್ನು ಪಡೆಯಲಾಗಿದೆ ಎಂದರು.