ಬಾಗಲಕೋಟೆ: ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರು ಬಿಜೆಪಿ ಪಕ್ಷದಲ್ಲಿ ಪ್ರಬಲ ಮುಖಂಡರು. ಮುಧೋಳ ಮೀಸಲು ಮತ ಕ್ಷೇತ್ರದಲ್ಲಿ ನಾಲ್ಕು ಬಾರಿ ಆಯ್ಕೆ ಆಗಿದ್ದರೂ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಂಡು ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ಮತಕ್ಷೇತ್ರದಲ್ಲಿ ಸರಿಯಾಗಿ ಅಭಿವೃದ್ಧಿ ಆಗದ ಹಿನ್ನೆಲೆ ಜನರಲ್ಲಿ ನಿರಾಶೆ ಮೂಡಿತ್ತು. ಈಗ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆ ಜನರಲ್ಲಿ ಸಂತಸ ಮೂಡಿದೆ. ನಾಲ್ಕು ಬಾರಿ ಶಾಸಕರಾದ ಗೋವಿಂದ ಕಾರಜೋಳರ ಅದೃಷ್ಟದ ಬಾಗಿಲು ತೆರೆದಿದೆ. ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಲೋಕೋಪಯೋಗಿ ಇಲಾಖೆ ಖಾತೆ ಸಿಕ್ಕಿದೆ. ಇದರಿಂದ ಮುಧೋಳ ಪಟ್ಟಣದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಸುಧಾರಣೆ, ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ ಸೇರಿ ಇತರ ಸೌಲಭ್ಯಗಳು ದೂರಕಲಿವೆ ಎಂದು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಡಾ.ಸಂಜಯ ಗಾರಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ರಾಜಕೀಯ ತಿಕ್ಕಾಟದಿಂದ ಇಷ್ಟು ವರ್ಷ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ಆಗಿರುವ ಮುಧೋಳದಲ್ಲಿ ರಸ್ತೆ ಅಭಿವೃದ್ಧಿ ಇಲ್ಲ. ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ತೊಂದರೆ ಅನುಭವಿಸುವುದು ಸಾಮಾನ್ಯ. ರಿಂಗ್ ರೋಡ್ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ. ಬೈಪಾಸ್ ರಸ್ತೆಗೆ ಚಾಲನೆ ಸಿಕ್ಕಿಲ್ಲ, ಕುಡಿಯುವ ನೀರು ಸೇರಿದಂತೆ ಇತರ ಅಭಿವೃದ್ಧಿ ಕಾರ್ಯ ಮಾಡುವುದು ಅಗತ್ಯವಿದೆ. ಈ ಬಾರಿ ಕಾರಜೋಳ ಅವರು ಡಿಸಿಎಂ ಆಗಿರುವುದರಿಂದ ಎಲ್ಲಾ ಕಾರ್ಯಗಳು ಆಗಲಿವೆ ಎಂದು ಜನ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅಂತಾರೆ ಸ್ಥಳೀಯರಾದ ರವಿಕುಮಾರ್ ಶಿಂಧೆ.
ಈಗ ಕ್ಷೇತ್ರದ ಜನತೆಯ ಋಣ ತೀರಿಸುವ ಸೌಭಾಗ್ಯ ಗೋವಿಂದ ಕಾರಜೋಳ ಅವರಿಗೆ ಸಿಕ್ಕಿದೆ. ತಮ್ಮ ಅವಧಿಯಲ್ಲಿ ಯಾವ ರೀತಿ ಅಭಿವೃದ್ಧಿ ಪಡಿಸುತ್ತಾರೆ ಎಂದು ಕಾಯ್ದು ನೋಡಬೇಕಾಗಿದೆ.