ಬಾಗಲಕೋಟೆ: ಕೋವಿಡ್ -19 ಸೋಂಕು ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಆರ್. ಬಿ. ತಿಮ್ಮಾಪೂರ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲರೂ ಭಯದಿಂದ ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ. ಸ್ವತಃ ರಾಹುಲ್ ಗಾಂಧಿಯವರೇ ಚಪ್ಪಾಳೆ ತಟ್ಟಿ ಪ್ರಧಾನಿ ಮಂತ್ರಿ ಮೋದಿಯವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ಯಪಡಿಸಿದ್ದಾರೆ. ಆದರೆ ವಿಧಾನ ಪರಿಷತ್ ಸದಸ್ಯ ತಿಮ್ಮಾಪೂರ ಅವರು ರಾಜಕೀಯ ಮಾಡುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಜಾಲಿಹಾಳ ಗ್ರಾಮದ ರಂಗನಾಥ ಪಾಟೀಲ ಎಂಬುವವರು ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂಗಳ ಚೆಕ್ ಅನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.