ಬಾಗಲಕೋಟೆ: ನೇಕಾರರು ಸಾಂಪ್ರದಾಯಿಕವಾಗಿ ಸೀರೆ ತಯಾರು ಮಾಡುವ ಗುಳೇದಗುಡ್ಡ ಖಣಕ್ಕೆ ತನ್ನದೇ ಛಾಪು ಇತ್ತು. ಆದರೆ ಇಂದಿನ ಫ್ಯಾಷನ್ ಯುಗದಿಂದ ತೆರೆಯ ಮರೆಗೆ ಸರಿಯುತ್ತಿದ್ದ ಖಣಕ್ಕೆ ಹೊಸ ಟಚ್ ನೀಡಲಾಗುತ್ತಿದೆ. ದೀಪಾವಳಿ ಹಬ್ಬದ ಅಂಗವಾಗಿ ಖಣದಿಂದ ತಯಾರಿಸಿದ ಬಟ್ಟೆಯಿಂದ ಆಕಾಶ ಬುಟ್ಟಿ, ಮಾಸ್ಕ್, ಚೂಡಿದಾರ್ ಸೇರಿದಂತೆ ವಿವಿಧ ಬಗೆಯ ವಿನ್ಯಾಸ ಮಾಡಿ ಮಾರಾಟ ಮಾಡುವ ಮೂಲಕ ಗಮನ ಸೆಳೆಯಲಾಗುತ್ತಿದೆ.
ಗುಳೇದಗುಡ್ಡ ಖಣಕ್ಕೆ ಐತಿಹಾಸಿಕ ಹಿನ್ನೆಲೆ ಹಾಗೂ ತನ್ನದೇ ಆದ ಛಾಪು ಇದೆ. ಇಳಕಲ್ ಸೀರೆಗೆ ಗುಳೇದಗುಡ್ಡ ಖಣ ಖ್ಯಾತಿ ಪಡೆದುಕೊಂಡಿದೆ. ಇಂದಿನ ಫ್ಯಾಷನ್ ಯುಗದಲ್ಲಿ ನಶಿಸಿ ಹೋಗುತ್ತಿರುವ ಸಾಂಪ್ರದಾಯಿಕ ವೃತ್ತಿಗೆ ಹೊಸ ಟಚ್ ನೀಡುವ ಮೂಲಕ ಉದ್ಯೋಗ ಬೆಳೆಸಲಾಗುತ್ತಿದೆ. ಗುಳೇದಗುಡ್ಡ ಪಟ್ಟಣದಲ್ಲಿರುವ ಇನಾನಿ ಕುಟುಂಬದವರು ಲಾಕ್ಡೌನ್ ಸಮಯದಲ್ಲಿ ಸುಮ್ಮನೆ ಕುಳಿತು ವಿಚಾರ ಮಾಡುತ್ತಿರುವ ಸಮಯದಲ್ಲಿ ಹೊಸ ವಿನ್ಯಾಸ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಗುಳೇದಗುಡ್ಡ ಖಣದಿಂದ ದೀಪಾವಳಿ ಆಕಾಶ ಬುಟ್ಟಿಯನ್ನು ತಯಾರು ಮಾಡಿದ್ದಾರೆ. ಅಲ್ಲದೆ ಮಾಸ್ಕ್ ಸೇರಿದಂತೆ ಪ್ರತಿನಿತ್ಯ ಬಳಕೆ ಆಗುವಂತಹ ಡಿಸೈನ್ ತಯಾರಿಸಿದ್ದಾರೆ.
ಇಳಕಲ್ ಸೀರೆಯನ್ನು ಹಿಂದಿನ ಕಾಲದಲ್ಲಿ ಕೇವಲ ಹಿರಿಯ ವಯಸ್ಸಿನ ಮಹಿಳೆಯರು, ಅಜ್ಜಿಂದಿಯರು ತೂಡುತ್ತಿದ್ದರು. ಆದರೆ ಈಗ ಯುವತಿಯರನ್ನು ಆಕರ್ಷಿಸಲು ಇಳಕಲ್ ಸೀರೆಗಳನ್ನು ಹೊಸ ಹೊಸ ವಿನ್ಯಾಸ ಮಾಡಿ, ಚೂಡಿದಾರ್, ತಲೆ ದಿಂಬು, ಮಾಸ್ಕ್, ಆಕಾಶ ಬುಟ್ಟಿ ತಯಾರು ಮಾಡುತ್ತಿದ್ದಾರೆ. ಒಂದು ಆಕಾಶ ಬುಟ್ಟಿಗೆ 500ರಿಂದ 700 ರೂಪಾಯಿಗಳವರೆಗೆ ದರ ನಿಗದಿ ಮಾಡಿದ್ದು, ಆನ್ಲೈನ್ನಲ್ಲಿಯೂ ಮಾರಾಟ ಮಾಡಲಾಗುತ್ತಿದೆ.