ಬಾಗಲಕೋಟೆ: ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಸರ್ಕಾರದಿಂದ ಈವರೆಗೆ ಒಟ್ಟು 75 ಕೋಟಿ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು.
ವಿವಿಧ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಮೊದಲು 10 ಕೋಟಿ, ನಿನ್ನೆ 25 ಕೋಟಿ ಹಾಗೂ ಇಂದು 40 ಕೋಟಿ ಸೇರಿ ಒಟ್ಟು 75 ಕೋಟಿ ಬಿಡುಗಡೆಯಾಗಿದೆ ಎಂದರು.
ಸೋಮವಾರ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಆರ್ಟಿಜಿಎಸ್ ಮೂಲಕ ನೇರವಾಗಿ 8,500 ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ 8.5 ಕೋಟಿ ರೂಪಾಯಿ ಜಮಾ ಮಾಡಲಾಗಿದ್ದು, ನಾಳೆ ಪುನಃ 15 ಸಾವಿರ ಹಾಗೂ ಇನ್ನೆರಡು ದಿನದಲ್ಲಿ ಮತ್ತೆ 15 ಸಾವಿರ ಸೇರಿದಂತೆ 30 ಸಾವಿರ ಸಂತ್ರಸ್ತರಿಗೆ ಜಮಾ ಮಾಡಲಾಗುವುದೆಂದರು.
ಪರಿಹಾರ ವಿತರಣೆ ಸಂಪೂರ್ಣ ಪಾರದರ್ಶಕತೆ : ಪ್ರವಾಹದಿಂದ ಜಿಲ್ಲೆಯ ಸಂತ್ರಸ್ತರ ಬದುಕೇ ತಲ್ಲಣಗೊಂಡ ಹಿನ್ನೆಲೆಯಲ್ಲಿ ಪ್ರವಾಹ ಪರಿಹಾರವನ್ನು ನುರಿತ ತಂಡಗಳ ಮುಖಾಂತರ ನೇರವಾಗಿ ಆಯಾ ಸಂತ್ರಸ್ತರ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಜಮಾ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಈ ಕಾರ್ಯವನ್ನು ಸಂಪೂರ್ಣ ಪಾರದರ್ಶಕವಾಗಿ ಮಾಡಲಾಗುತ್ತಿದೆ ಎಂದರು.
ಪರಿಹಾರದಲ್ಲಿ ಯಾವುದೇ ದುರುಪಯೋಗಕ್ಕೆ ಅವಕಾಶ ನೀಡದೇ ಅಧಿಕಾರಿಗಳು ಸಂಪೂರ್ಣ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಪಾರದರ್ಶಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಕಳೆದ 2 ದಿನಗಳಿಂದ ಸಂತ್ರಸ್ತರ ಆಧಾರ ಕಾರ್ಡ್, ಬ್ಯಾಂಕ್ ಖಾತೆಗಳ ಆರ್.ಟಿ.ಜಿ.ಎಸ್ ಕ್ರೋಢೀಕರಣದತ್ತ ಗಮನ ಹರಿಸಲಾಗಿತ್ತು. ಇವೆಲ್ಲವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ತಾತ್ಕಾಲಿಕ ಶೆಡ್ ನಿರ್ಮಾಣ: ಪ್ರವಾಹದಿಂದ ಸಂಪೂರ್ಣವಾಗಿ ಹಾನಿಗೊಳಗಾಗಿರುವ ಮನೆಗಳ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಕೊಡಲಾಗುತ್ತಿದೆ. ಲೋಕೋಪಯೋಗಿ, ನಿರ್ಮಿತಿ ಕೇಂದ್ರ ಹಾಗೂ ಭೂಸೇನಾ ನಿಗಮದಿಂದ ಜಂಟಿಯಾಗಿ ತಾತ್ಕಾಲಿಕ ಶೆಡ್ ನಿರ್ಮಿಸುವ ಕಾರ್ಯ ಮಾಡಲಾಗುತ್ತದೆ. ಸಂಪೂರ್ಣ ಮನೆ ಹಾಳಾಗಿರುವ ಹಾಗೂ ತಾತ್ಕಾಲಿಕ ಶೆಡ್‍ಗಳಲ್ಲಿ ವಾಸಿಸುವ ಸಂತ್ರಸ್ತರಿಗೆ ಗರಿಷ್ಠ 10 ತಿಂಗಳ ಅವಧಿಗೆ ಸೀಮಿತಗೊಳಿಸಿ ಮಾಸಿಕ 5 ಸಾವಿರ ರೂಪಾಯಿ ಬಾಡಿಗೆ ಮೊತ್ತವನ್ನು ನೀಡಲಾಗುವುದೆಂದರು.
ಪಟ್ಟದಕಲ್ಲ ಸಂಪೂರ್ಣ ಸ್ಥಳಾಂತರಕ್ಕೆ ಡಿಸಿ ಒಲವು: ಪ್ರವಾಹದಿಂದ ತತ್ತರಿಸಿದ ಐತಿಹಾಸಿಕ ಸ್ಮಾರಕ ತಾಣವಾದ ಪಟ್ಟದಕಲ್ಲು ಗ್ರಾಮವನ್ನು ಸಂಪೂರ್ಣ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿಗಳು ಒಲವು ತೋರಿದ್ದು, ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಆಸರೆ ಮನೆ: ಕಳೆದ 2009 ರ ಪ್ರವಾಹದಲ್ಲಿ ಸಾವಿರಾರು ಮನೆಗಳ ನಿರ್ಮಾಣ ಮಾಡಲಾಗಿತ್ತು. ಸಂತ್ರಸ್ತರು ಬಳಸದ ಕಾರಣ ಆಸರೆ ಮನೆಗಳು ಶಿಥಿಲಗೊಂಡಿವೆ. ಅವುಗಳನ್ನು ಪುನಃ ರಿಪೇರಿಗೆ ಸುತ್ತ ಮುತ್ತಲೂ ಜಾಲಿಗಳು ಬೆಳೆದಿದ್ದು, ಅವುಗಳನ್ನು ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗುವುದು. ಕೆಲವರಿಗೆ ಹಕ್ಕುಪತ್ರ ವಿತರಣೆ ಬಾಕಿ ಸೇರಿದಂತೆ ಇನ್ನಿತರ ವಿಷಯಗಳನ್ನು ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಸಂಪೂರ್ಣ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರು ತಾವೇ ತಮ್ಮ ಅನುಕೂಲದಂತೆ ಮನೆ ನಿರ್ಮಿಸಿಕೊಳ್ಳುವುದಾದರೆ ಹಂತ ಹಂತವಾಗಿ 5 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಪಿಡಿಒ ಹಾಗೂ ನಗರ ಪ್ರದೇಶದಲ್ಲಿ ಮುಖ್ಯಾಧಿಕಾರಿಗಳು ಉಸ್ತುವಾರಿ ವಹಿಸಲಿದ್ದಾರೆಂದರು.
ಪ್ರಾಣಹಾನಿ ಪರಿಹಾರ ವಿತರಣೆ: ಪ್ರವಾಹದಿಂದ ಇಲ್ಲಿವರೆಗೆ 3 ಜನ ಮೃತಪಟ್ಟಿದ್ದು, ತಲಾ 5 ಲಕ್ಷ ದಂತೆ ಒಟ್ಟು 15 ಲಕ್ಷ ರೂ.ಗಳ ಪರಿಹಾರಧನ ನೀಡಲಾಗಿದೆ. 150 ಜಾನುವಾರುಗಳು ಸಹ ಸಾವನ್ನಪ್ಪಿದ್ದು, ಒಟ್ಟು 5 ಲಕ್ಷ ಪರಿಹಾರಧನವನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಪ್ರವಾಹದಿಂದ 24,800 ಮನೆಗಳು ಹಾನಿಗೊಳಪಟ್ಟಿವೆ ಎಂದು ತಿಳಿಸಿದರು. ಸಭೆಯಲ್ಲಿ ನೋಡಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.