ಬಾಗಲಕೋಟೆ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ (ನಬಾರ್ಡ್) ಸಿದ್ಧಪಡಿಸಿದ 2020-21ನೇ ಸಾಲಿನ ಸಂಭಾವ್ಯ ಲಿಂಕ್ಡ್ ಕ್ರೆಡಿಟ್ ಯೋಜನೆಯು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಹಾಗೂ ಜನರು ಇದರ ಪ್ರಯೋಜನ ಪಡೆಯುವಂತಾಗಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬಾಯಕ್ಕ ಮೇಟಿ ತಿಳಿಸಿದರು.
ಜಿ.ಪಂ ಸಭಾಭವನದಲ್ಲಿ ನಡೆದ ಜಿಲ್ಲಾ ಅಗ್ರಣಿ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಲಿಂಕ್ಡ್ ಕ್ರೆಡಿಟ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ನಬಾರ್ಡ್ನ ಸಂಭಾವ್ಯ ಲಿಂಕ್ಡ್ ಯೋಜನೆಯು ಸಮರ್ಪಕವಾಗಿ ಅನುಷ್ಠಾನವಾಗುವಂತೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು.
ಜಿಲ್ಲಾ ಅಗ್ರಣಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಗೋಪಾಲ್ ರೆಡ್ಡಿ ಮಾತನಾಡಿ, ಈ ಕ್ರೆಡಿಟ್ ಯೋಜನೆಯಲ್ಲಿ ದೀರ್ಘಾವಧಿಯ ಭೌತಿಕ ಸಾಮರ್ಥ್ಯ, ಮೂಲಸೌಕರ್ಯ ಬೆಂಬಲದ ಲಭ್ಯತೆ, ಮಾರ್ಕೆಟಿಂಗ್ ಸೌಲಭ್ಯಗಳು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಬ್ಯಾಂಕ್ ಕ್ರೆಡಿಟ್ ಮೂಲಕ ಅಸ್ತಿತ್ವದಲ್ಲಿರುವ ಅಭಿವೃದ್ದಿಯ ಸಾಮರ್ಥ್ಯವನ್ನು ನಕ್ಷೆ ಮಾಡುವ ಮೂಲ ಉದ್ದೇಶದಿಂದ ಸಂಭಾವ್ಯ ಲಿಂಕ್ಡ್ ಕ್ರೆಡಿಟ್ ಯೋಜನೆ (ಪಿಎಲ್‍ಪಿ) ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಪಿಎಲ್‍ಪಿ ಯೋಜನೆಯನ್ನು ಆದ್ಯತೆ ವಲಯದ ಅಡಿಯಲ್ಲಿ ಬಳಸಬಹುದಾದ ಸಾಲದ ಸಾಮರ್ಥ್ಯವನ್ನು 9952.97 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದು ಪ್ರಸ್ತುತ (2019-20) ವಾರ್ಷಿಕ ಸಾಲ ಯೋಜನೆಗಿಂತ 1216.82 ಕೋಟಿ ರೂ. ಹೆಚ್ಚಾಗಿರುತ್ತದೆ. ಈ ಪಿಎಲ್‍ಪಿ ದಾಖಲೆಯಲ್ಲಿ ಮಾಡಿದ ಮೌಲ್ಯಮಾಪನದ ಆಧಾರದ ಮೇಲೆ 2020-21ರ ಜಿಲ್ಲೆಯ ಎಸಿಪಿ ಸಿದ್ಧಪಡಿಸಲಾಗಿದೆ. ಈ ಯೋಜನೆಯ ಪ್ರಕಾರ ಕೃಷಿ (ಬೆಳೆ ಉತ್ಪಾದನೆ + ಕೃಷಿ) 8496.70 ಕೋಟಿ ರೂ., ಎಂಎಸ್‍ಎಂಇ 834.12 ಕೋಟಿ ರೂ., ರಪ್ತು ಸಾಲ 111.28 ಕೋಟಿ ರೂ., ಶಿಕ್ಷಣ 52.66 ಕೋಟಿ, ವಸತಿ 279.40 ಕೋಟಿ, ನವೀಕರಿಸಬಹುದಾದ ಶಕ್ತಿ 60.76 ಕೋಟಿ ಮತ್ತು ಸಾಮಾಜಿಕ ಮೂಲಸೌಕರ್ಯ 118.05 ಕೋಟಿ ರೂ. ಒಳಗೊಂಡಿದೆ. ಸಂಭಾವ್ಯ ಲಿಂಕ್ ಕ್ರೆಡಿಟ್ ಯೋಜನೆಯ ವಿಷಯ ಹೈಟೆಕ್ ಅಗ್ರಿಕಲ್ಚರ್ ಆಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಬಾರ್ಡ್ನ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕಿ ಯಮುನಾ ಪೈ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ
ಕಚೇರಿಯ ಮುಖ್ಯ ವ್ಯವಸ್ಥಾಪಕ ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.