ಬಾಗಲಕೋಟೆ : ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರ ವಿರುದ್ಧ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಆರ್ ಬಿ ತಿಮ್ಮಾಪುರ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ನವನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಇಂದಿರಾಜಿ ಬಗ್ಗೆ ಮಾತನಾಡೋಕೆ ಇವರೇನು ಟಾಟಾ-ಬಿರ್ಲಾ ವಂಶಸ್ಥರೇ, ನೀವೇನು ಸ್ವಾತಂತ್ರ ಹೋರಾಟಗಾರರ ಮನೆತನದಿಂದ ಬಂದಿದ್ದೀರಾ, ಇಂದಿರಾಜಿ ಅವರನ್ನ ಜನ ಬಂಗಾರದಲ್ಲಿ ತೂಗತಾರೆ, ನಿಮ್ಮನ್ನ ತೂಗಲಿಕ್ಕಾಗುತ್ತಾ ಎಂದು ಕಿಡಿ ಕಾರಿದ್ದಾರೆ.
ಪಿಡಬ್ಲ್ಯೂಡಿಯಲ್ಲಿ ಕಾರಜೋಳ ಸ್ಟೋರ್ ಕೀಪರ್ ಆದವರು, ಇನ್ನೇನು ವಿಚಾರಣೆ ನಡೆದು ಸಸ್ಪೆಂಡ್ ಆಗಲಿಕ್ಕೆ ಫೈಲ್ ಮಾಡಬೇಕೆನ್ನುವಷ್ಟರಲ್ಲಿ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದವರು ನೀವು. ಇದು ನಮಗೆ ಗೊತ್ತಿಲ್ವಾ, ಇಂದು ರನ್ನ ಫ್ಯಾಕ್ಟರಿಯಲ್ಲಿ ಏನು ಲಾಸ್ ಮಾಡಿದೀರಿ ಅದು ಜನರಿಗೆ ಗೊತ್ತಿಲ್ವಾ, ಸರ್ಕಾರದಲ್ಲಿ ನಿಮ್ಮ ಶಾಸಕರು ನಿಮ್ಮ ಬಗ್ಗೆ ಏನು ಹೇಳ್ತಾರೆ ಅನ್ನೋದನ್ನ ನೆನಪಿಟ್ಟು ಮಾತನಾಡಿ ಎಂದರು.
ಇಂದಿರಾಜಿ & ಎಂ ಬಿ ಪಾಟೀಲ್ ಬಗ್ಗೆ ಮಾತನಾಡ್ತೀರಿ ಅಲ್ಲ ಎಂ ಬಿ ಪಾಟೀಲ, ಬಿ ಎಂ ಪಾಟೀಲ ಅವರ ಉಪಕಾರ ಕಾರಜೋಳ ಅವರ ಮೇಲಿದೆ. ಜನರೆದುರು ಪಾಟೀಲ ಕುಟುಂಬದ ಋಣ ನನ್ನ ಮೇಲೆ ಇಲ್ಲ ಅಂತಾ ಹೇಳಲಿ ನೋಡೋಣ, ಅವರ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ ಎಂದರು.
ಭ್ರಷ್ಟಾಚಾರದ ಹಣದಿಂದ ಅಹಂ ಭಾವನೆಯಿಂದ ಮಾತನಾಡುತ್ತಿರುವ ಕಾರಜೋಳ ಅವರಿಗೆ ವಿರೋಧ ಪಕ್ಷದವರು ನಾವು ಹಾಗೂ ಜನತೆ ಪಾಠ ಕಲಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದರು. ಇದೇ ಸಮಯದಲ್ಲಿ, ದಲಿತ ಸಿಎಂ ವಿಚಾರವಾಗಿ ಮಾತನಾಡಿ, ಮೊದಲು ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲಿ, ಆಮೇಲೆ ನಮ್ಮ ಹೈಕಮಾಂಡ್‌ನಲ್ಲಿ ವಿನಂತಿ ಮಾಡುತ್ತೇವೆ. ಅದರ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ತಗೆದುಕೊಳ್ಳುತ್ತದೆ ಎಂದರು.