ಬಾಗಲಕೋಟೆ: ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಡುವಿನ ವಾಕ್ಸಮರ ಮುಗಿಯುವಂತೆ ಕಾಣುತ್ತಿಲ್ಲ. ಈ ಇಬ್ಬರು ರಾಜಕಾರಣಿಗಳ ನಡುವಿನ ಕೆಸರೆರಚಾಟ ಇದೀಗ ಗಂಡಸ್ತನ ಮತ್ತು ತಾಕತ್ತಿನ ಸವಾಲ್ಗೆ ಬಂದು ನಿಂತಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ, ನನಗೆ 64 ವಯಸ್ಸಾಗಿದೆ. ನಾನು ಕುಸ್ತಿಗಿಳಿದರೆ ಜನ ನನ್ನನ್ನು ಬೈತಾರೆ. ಮನ್ಯಾಗ 38 ವರ್ಷದ ಮಗ ಅದಾನ, ಅವನನ್ನು ಕಳಿಸಬಾರದೇನು ಅಂತಾ ಕೇಳ್ತಾರೆ. ಕಾಶಪ್ಪನವರ್ಗೆ ಶಕ್ತಿ ಇದ್ದರೆ ಅವನ ಜತೆ ಕುಸ್ತಿ ಹಿಡಿಯಲಿ. ಇಳಕಲ್ ನಗರದಲ್ಲಿ ಜಂಘಿ ಕುಸ್ತಿಗೆ ಏರ್ಪಟು ಮಾಡೋಣವೆಂದು ಶಾಸಕ ದೊಡ್ಡನಗೌಡ ಪಾಟೀಲ ಸವಾಲು ಹಾಕಿದರು.
ಇದನ್ನೂ ಓದಿ: ಬಿಜೆಪಿ ವಿರುದ್ಧ ವಿಜಯಾನಂದ ಕಾಶಪ್ಪನವರ್ ಟೀಕಾಪ್ರಹಾರ
ಮುಖ್ಯಮಂತ್ರಿಯಾಗಿದ್ದಾಗ ಎಸ್.ಆರ್.ಕಂಠಿ, ದಿ.ಪಿ.ಎಂ ನಾಡಗೌಡ ಅವರು ಹಾಕಿಕೊಟ್ಟ ಆದರ್ಶ, ತತ್ವಗಳು ನನ್ನ ಬಳಿಯಿವೆ. ಅವೆಲ್ಲವನ್ನು ಬಿಟ್ಟು ನೀನು ಹುಚ್ಚುಚ್ಚಾಗಿ ಕುಣಿದರೆ ಜನ ನಿನಗೆ ಬುದ್ದಿ ಕಲಿಸುತ್ತಾರೆ. ನಿನ್ನ ಟೀಕೆಗಳು ನಾನು ಎಚ್ಚೆತ್ತುಕೊಂಡು ಅಭಿವೃದ್ಧಿಯ ಕೆಲಸ ಮಾಡುವಂತಿರಬೇಕು. ಇಲ್ಲಿ ಕುಸ್ತಿ ಆಡಾಕ ಬಂದಿವೇನು?, ಕುಸ್ತಿ ಹಿಡಿಬೇಕಂದ್ರ ಅದೇನು ದೊಡ್ಡದಲ್ಲ. ನಮಗ ಕುಸ್ತಿ ಹಿಡಿಯೋದು ಗೊತ್ತೈತಿ, ರಾಜಕಾರಣ ಮಾಡೋದೂ ಗೊತ್ತೈತಿ. ಬೇರೆಯವರು ನನಗೆ ಫೋನ್ ಮಾಡಿ ಅವನಿಗೆ ತಲೆ ಕೆಟ್ಟೈತೇನು ಅಂತ ಕೇಳ್ತಾರಾ ಎಂದು ಹರಿಹಾಯ್ದರು.
ಇದನ್ನೂ ಓದಿ: ಶಾಸಕ ದೊಡ್ಡನಗೌಡ ಪಾಟೀಲ ವಿರುದ್ದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಕಿಡಿ
ಎರಡು ದಿನಗಳ ಹಿಂದಷ್ಟೇ ಶಿವನಗುತ್ತಿ ಗ್ರಾಮದಲ್ಲಿ ನಡೆದ ನಾಟಕ ಪ್ರದರ್ಶನ ಉದ್ಘಾಟನೆ ಸಮಾರಂಭ ದಲ್ಲಿ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಅವರ ಪುತ್ರ ರಾಜುಗೌಡಗೆ ಬಹಿರಂಗವಾಗಿ ತೊಡೆತಟ್ಟಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸವಾಲು ಹಾಕಿದ್ದರು. ತಾಕತ್ತು, ಗಂಡಸ್ತನ ಇದ್ರೆ ಅಪ್ಪ, ಮಗ. ಬಂದು ಬಿಡ್ರಿ, ನಾನು ನೋಡ್ಕೋಂತೇನಿ ಅಂತ ಸೆಡ್ಡು ಹೊಡೆದಿದ್ದರು.