ಬಾಗಲಕೋಟೆ: ನಮ್ದು ಜನರಿಗೆ ತಲುಪುವಂತಹ ಕಾರ್ಯಕ್ರಮ, ಬುರುಡೆ ಬಿಡುವ ಕಾರ್ಯಕ್ರಮ ಅಲ್ಲ ಎಂದು ಕಂದಾಯ ಇಲಾಖೆ ಸಚಿವ ಆರ್ ಅಶೋಕ್ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಗೆ ಟಾಂಗ್ ನೀಡಿದರು. ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಂಗವಾಗಿ ಆಯೋಜನೆ ಮಾಡಿರುವ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ನಮ್ಮದು ಜನರಿಗೆ ತಲುಪುವಂತಹ ಕಾರ್ಯಕ್ರಮ, ಅಧಿಕಾರಕ್ಕೆ ಬಂದ ಮೇಲೆ ನಾವು ಎಲ್ಲಾ ಯೋಜನೆಗಳನ್ನು ಕೊಡುತ್ತೇವೆ. ಎಷ್ಟು ಹಣ ಬೇಕೋ ಎಲ್ಲಾ ಕೊಡುತ್ತೀನಿ ಎಂದು ಹೇಳಿ ಹೋಗುವ ಕಾರ್ಯಕ್ರಮ ಅಲ್ಲ. ನಮ್ಮದು ಸ್ಥಳದಲ್ಲೇ ಸುಮಾರು 18 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಬಗೆ ಹರಿಸುವಂತಹ ಕಾರ್ಯಕ್ರಮ. ನಾಳೆ ಬಾ ಎನ್ನುವ ಸ್ಕೀಮ್ ಯಾವುದು ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಗೆ ಪರೋಕ್ಷವಾಗಿ ಲೇವಡಿ ಮಾಡಿದರು.
ಇದು ಸರ್ಕಾರಿ ಕಾರ್ಯಕ್ರಮ ಹೀಗಾಗಿ ಇಲ್ಲಿ ರಾಜಕೀಯ ಮಾತನಾಡವುದಿಲ್ಲ, ಕಾಂಗ್ರೆಸ್ ಪಕ್ಷದವರು 50 ವರ್ಷ ದೇಶವನ್ನು ಆಳಿದ್ದಾರೆ, ರಾಜ್ಯದಲ್ಲೂ ಸುಮಾರು 50 ವರ್ಷ ಅಧಿಕಾರ ನಡೆಸಿದ್ದಾರೆ. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಯಾಕೆ ಯೋಜನೆಗಳನ್ನು ಕೊಡಲಿಲ್ಲ ಎಂದು ಪ್ರಶ್ನಿಸಿದರು. ಈಗ ಅಧಿಕಾರ ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ ಎಂದು ಎಂದು ಅಶೋಕ್ ಟೀಕಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ನಲ್ಲಿ ಸಾಕಷ್ಟು ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ನೀಡಿದ್ದಾರೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾನಿಧಿ ಯೋಜನೆ ಕೋಡುತ್ತಿದ್ದಾರೆ. ನಾವು ಏನು ಹೇಳುತ್ತೇವೋ ಅದನ್ನೇ ಮಾಡುತ್ತೇವೆ. ಕೆಲವರು ನಾಳೆ ಬಾ ಎಂದು ಬೋರ್ಡ್ ತೋರಿಸುತ್ತಾರೆ. ನಾಳೆ ಬಾ ಎಂದು ಹೇಳುವವರಿಗೆ ಜನರು ಕೂಡ ನಾಳೆ ಬಾ ಎನ್ನುತ್ತಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದರು.
ಇದನ್ನೂ ಓದಿ : 6000 ಕೋಟಿ ರೂ ಮೊತ್ತದ 1830 ಟೆಂಡರ್ ಕರೆದಿರುವುದು ನಿಯಮ ಬಾಹಿರ: ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ
ಇದೇ ಸಮಯದಲ್ಲಿ, ಎನ್‌ಪಿಎಸ್ ನೌಕರರ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದು ನನ್ನ ಇಲಾಖೆಗೆ ಸಂಬಂಧಪಟ್ಟಿಲ್ಲ. ಆದರೂ ಸಹ ಶಿಕ್ಷಣ ಸಚಿವರ ಜೊತೆ ಮಾತಾಡುತ್ತೇನೆ. ಎಲ್ಲರಿಗೂ ನ್ಯಾಯ ಸಿಗಬೇಕು. ನ್ಯಾಯ ಕೊಡುವುದರಲ್ಲಿ ತಪ್ಪಾದರೇ, ಅಧಿಕಾರಿಗಳಿಗೆ ನಾವು ಎಚ್ಚರಿಸಬೇಕು. ಆ ದೃಷ್ಠಿಯಿಂದ ಇಲಾಖೆಯ ಮುಖ್ಯಸ್ಥರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ಗ್ರಾಮ ವಾಸ್ತವ್ಯಕ್ಕೆ ಆಗಮಿಸಿ ಸಚಿವರಿಗೆ ವಿಶೇಷವಾಗಿ ಅಲಂಕರಿಸಿದ ಟ್ರಾಕ್ಟರ್ನಲ್ಲಿ ಅದ್ಧೂರಿಯಾಗಿ ವಾದ್ಯಗೋಷ್ಠಿಗಳ ಮೂಲಕ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಜೊತೆಗೆ ಎತ್ತಿನ ಗಾಡಿ ಮೆರವಣಿಗೆ ಮತ್ತು ಮಹಿಳೆಯರ ಕುಂಭ ಮೇಳ ಮೆರವಣಿಗೆಯನ್ನು ಸಹ ನಡೆಸಲಾಯಿತು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಜೊತೆ ಸಚಿವ ಮುರುಗೇಶ ನಿರಾಣಿ ಮತ್ತು ಸಂಸದ ಪಿ.ಸಿ ಗದ್ದಿಗೌಡರ ಭಾಗವಹಿಸಿದ್ದರು.
ಇದನ್ನೂ ಓದಿ : ನಾನೇ ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗಿದ್ದೇನೆ, ವೀರಶೈವ ಲಿಂಗಾಯತರು ಅಪಾರ್ಥ ಮಾಡಿಕೊಳ್ಳಬೇಡಿ: ಬಿಎಸ್ವೈ