ಬಾಗಲಕೋಟೆ: ಭಾರಿ ವಾಹನ ಪ್ರವೇಶ ನಿಷೇಧವಿದ್ದರೂ ಕೂಡ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದ ಸ್ಮಾರಕಕ್ಕೆ ಧಕ್ಕೆ ಉಂಟಾದ ಘಟನೆ ಬಾದಾಮಿಯಲ್ಲಿ ನಡೆದಿದೆ.
ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರ ಆಗಿರುವ ಬಾದಾಮಿಯ ಬನಶಂಕರಿ ದೇವಸ್ಥಾನ ಮುಂದೆ ಭಾರಿ ವಾಹನ ಪ್ರವೇಶಕ್ಕೆ ನಿಷೇಧವಿದೆ. ಆದರೂ ಬಾದಾಮಿ ಮೂಲಕ ಬಾಗಲಕೋಟೆ ನಗರಕ್ಕೆ ಬರುತ್ತಿದ್ದ ಮಹಾರಾಷ್ಟ್ರದ ಲಾರಿಯು ತಗಲಿ ಇಲ್ಲಿನ ಬನಶಂಕರಿ ಹೊಂಡ ಹಾಗೂ ದೇವಸ್ಥಾನದ ಪ್ರಮುಖ ದ್ವಾರಬಾಗಿಲಿಗೆ ಹಾನಿಯಾಗಿದೆ.
ಕಿರಿದಾದ ರಸ್ತೆಯಲ್ಲಿ ಚಾಲಕ ಅಜಾಗರೂಕತೆಯಿಂದ ಬೃಹತ್ ಲಾರಿಯನ್ನು ಕೊಂಡೊಯ್ದಿರುವುದೇ ಘಟನೆಗೆ ಕಾರಣವಾಗಿದೆ. ಇಂದು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.
ಲಾರಿ ತಗುಲಿದ್ದರಿಂದ ದ್ವಾರಬಾಗಿಲಿಗೆ ಆಧಾರವಾಗಿದ್ದ ಕಲ್ಲಿನ ಕಂಬ ಬೀಳುವ ಸ್ಥಿತಿಗೆ ತಲುಪಿದೆ. ಸ್ಥಳಕ್ಕೆ ಪೊಲೀಸರು, ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.