ಬಾಗಲಕೋಟೆ: ಕೊರೊನಾದಿಂದ ನಾಟಕ ಕಂಪನಿ ಕಲಾವಿದರು ಸಂಕಷ್ಟದಲ್ಲಿದ್ದು, ಒಪ್ಪೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಜಮಖಂಡಿ, ಇಲಕಲ್ಲ, ಮಹಾಲಿಂಗಪೂರ ಸೇರಿದಂತೆ ಜಿಲ್ಲೆಯ ಹಲವೆಡೆ ನಾಟಕ ಕಂಪನಿಯ ಟೆಂಟ್ ಹಾಕಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದ ಕಲಾವಿದರಿಗೆ, ಲಾಕ್ಡೌನ್ನಿಂದ ನಾಟಕ ಪ್ರದರ್ಶನ ಬಂದ್ ಆಗಿದ್ದು, ಆದಾಯವಿಲ್ಲದೇ ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿದ್ದಾರೆ.
ಪ್ರತಿ ವರ್ಷ ಜನವರಿಯಿಂದ ಮೇ ತಿಂಗಳವರೆಗೆ ಜಾತ್ರೆ, ಉತ್ಸವ, ಹಬ್ಬ ಹರಿದಿನ ನಡೆಯುತ್ತಿವೆ. ಈ ಸಮಯದಲ್ಲಿ ನಾಟಕ ಪ್ರದರ್ಶನ ಪ್ರಮುಖವಾಗಿ ಗಮನ ಸೆಳೆಯುತ್ತಿದ್ದವು. ನಾಟಕ ಪ್ರದರ್ಶನ ಸಮಯದಲ್ಲಿ, ಪಾತ್ರ ಮಾಡುವ ಕಲಾವಿದರು, ಸಂಗೀತ ಕಲಾವಿದರು, ಪರದೆ ಎಳೆಯುವವರು ಹಾಗೂ ವಾಹನ ಮೂಲಕ ಪ್ರಚಾರ ಮಾಡುವವರು ಸೇರಿದಂತೆ ಇತರ ಚಿಕ್ಕಪುಟ್ಟ ಕೆಲಸ ಮಾಡುವವರೆಗೂ ಉದ್ಯೋಗ ಸಿಗುತ್ತದೆ. ಆದರೆ ಅದೆಲ್ಲದಕ್ಕೂ ಈಗ ಕಲ್ಲು ಬಿದ್ದಿದೆ.
ಈಗ ಕೊರೊನಾದಿಂದ ಎಲ್ಲವೂ ಬಂದ್ ಆಗಿದ್ದು, ಯಾವುದೇ ಆದಾಯ ಇಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಸಾಲ ಸೂಲ ಮಾಡಿ, ನಾಟಕಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ತೆಗೆದುಕೊಂಡಿರುತ್ತಾರೆ. ಆದರೆ, ಆದಾಯ ಇಲ್ಲದೆ ಈಗ ತೊಂದರೆ ಪಡುವಂತಾಗಿದೆ. ಸರ್ಕಾರ ಈ ಬಡ ಕಲಾವಿದರಿಗೆ ಪರಿಹಾರ ಧನ ನೀಡಬೇಕು ಎಂದು ನೊಂದ ಕಲಾವಿದರು ಮನವಿ ಮಾಡಿಕೊಂಡಿದ್ದಾರೆ.