ಬಾಗಲಕೋಟೆ: ಬಿಜೆಪಿಯಿಂದ ಬಹಳಷ್ಟು ಜನ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಇಲ್ಲಿ ಬಂದ ಮೇಲೆ ಅವರ ಸ್ಥಾನಮಾನದ ಬಗ್ಗೆ ಆಲೋಚನೆ ಮಾಡಬೇಕಾಗುತ್ತದೆ ಎಂದು ಲಕ್ಷ್ಮಣ ಸವದಿ ಹೇಳಿದರು. ಬಾಗಲಕೋಟೆ ನಗರದಲ್ಲಿ ಸೋಮವಾರ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತಾ, ಬಿಜೆಪಿಯಿಂದ ಕರೆ ತಂದವರಿಗೆ ಯಾವ ಸ್ಥಾನಮಾನ ಕೊಡಬೇಕು. ಅವರ ಕ್ಷೇತ್ರದಲ್ಲಿ ಸಹಮತ ಇರುವ ಬಗ್ಗೆ ಚರ್ಚೆ ಮಾಡುತ್ತೇವೆ. ಬರುವವರನ್ನು ಕರೆತಂದಾಗ ಯಾರಿಗೂ ಅನ್ಯಾಯ ಮತ್ತು ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ವಿ.ಸೋಮಣ್ಣ, ಹೆಬ್ಬಾರ್ ಸೇರಿ ಯಾರಾದರೂ ಕಾಂಗ್ರೆಸ್‌ಗೆ ಬರುವ ಸಾಧ್ಯತೆ ಇದೆಯೇ? ಅವರನ್ನು ಕರೆತರುವ ಪ್ರಯತ್ನ ನಡೀತಿದೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ಸದ್ಯ ನಾವು ಚರ್ಚೆ ಮಾಡಲು ಹೋಗುವುದಿಲ್ಲ. ಜನವರಿ 26ರವರೆಗೆ ನೀವು ಕಾಯಬೇಕು. ಆ ನಂತರ ಚಟುವಟಿಕೆ ಆರಂಭ ಮಾಡುತ್ತೇವೆ ಎಂದು ತಿಳಿಸಿದರು.
ಈಗ ಎಷ್ಟು ಜನ ತಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರಕ್ಕೆ ಸವದಿ ಪ್ರತಿಕ್ರಿಯೆ ನೀಡುತ್ತಾ, ನಾವು ಗೋಲಿ ಹೊಡೆಯುವಾಗ ಎರಡು ರೀತಿಯಿಂದ ಹೊಡೆಯುತ್ತೇವೆ. ಒಂದು ಚರ್ರಿಗೋಲಿ ಅಂತ ಇರುತ್ತೆ, ಅದು ಛಿದ್ರವಾಗಿರುತ್ತೆ. ಅದು ಎಷ್ಟು ಮಂದಿಗೆ ಬಡಿಯುತ್ತೋ ಗೊತ್ತಿಲ್ಲ. ಹಾಗೇ ಫೈರಿಂಗ್ನಲ್ಲಿ ಎರಡು ರೀತಿ ಇರುತ್ತದೆ. ಯಾವಾಗ ಯಾವ ಸಂದರ್ಭದಲ್ಲಿ ಯಾವ ಫೈರಿಂಗ್ ಮಾಡುತ್ತೇವೋ ಗೊತ್ತಿಲ್ಲ ಎಂದರು. ಫೈರಿಂಗ್ ಮಾಡೋದು ಫಿಕ್ಸಾ ಎಂಬ ಪ್ರಶ್ನೆಗೆ, ಇದು ನಮ್ಮ ಕರ್ತವ್ಯ. ಯಾಕೆಂದರೆ ಲೋಕಸಭೆಯಲ್ಲಿ ಗೆಲ್ಲಬೇಕಾದರೆ ರಾಜಕೀಯದಲ್ಲಿ ಕೆಲವೊಂದು ಧ್ರುವೀಕರಣ ಮಾಡಬೇಕಾಗುತ್ತೆ. ಅದನ್ನು ನಾವು ಮಾಡುತ್ತಿದ್ದೇವೆ ಎಂದು ಟಾಂಗ್ ನೀಡಿದರು. ಇದೇ ವೇಳೆ, ಇದು ಆಪರೇಷನ್ ಹಸ್ತ ಅಂತಲ್ಲ. ಯಾರು ಬಿಜೆಪಿಯಲ್ಲಿ ತಮಗೆ ಅವಹೇಳನವಾಗಿದೆ, ಬೇಸತ್ತಿದ್ದೇವೆ ಎಂದು ಹೇಳುತ್ತಿದ್ದಾರೋ, ಅಂಥವರನ್ನು ಗೌರವದಿಂದ ಪಕ್ಷಕ್ಕೆ ಕರೆತರುವ ಕೆಲಸ ಎಂದರು.
ಬಿಜೆಪಿ ಜೋಡೆತ್ತುಗಳ ವಿಚಾರ: ವಿಜಯೇಂದ್ರ ಮತ್ತು ಆರ್.ಅಶೋಕ್ ಜೋಡೆತ್ತುಗಳಾಗಿ ಲೋಕಸಭೆ ಗೆಲ್ಲುವುದಾಗಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸವದಿ, ಉತ್ತರ ಕರ್ನಾಟಕದಲ್ಲಿ ನಾಲ್ಕು ಎತ್ತು ಹೊಡೆಯುವ ಪದ್ಧತಿ ಇದೆ. ಜೋಡೆತ್ತಲ್ಲ, ನಾಲ್ಕೆತ್ತು ಹೂಡಿದರೂ ಸಹ ಅದನ್ನು ಎಳೆಯೋಕೆ ಆಗುವುದಿಲ್ಲ. ಯಾಕೆಂದರೆ ಜೋಡೆತ್ತುಗಳಲ್ಲಿ ಆ ಶಕ್ತಿ ಉಳಿದಿಲ್ಲ ಎಂದು ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ಸಂಭಾಷಣೆ ವಿವಾದ ವಿಚಾರವಾಗಿ ಮಾತನಾಡಿದ ಸವದಿ, ಈ ವಿಚಾರಕ್ಕೆ ಬಿಜೆಪಿಗರು ಮಾತನಾಡಿದ್ದನ್ನು ನೋಡಿ ನನಗೆ ನಗು ಬರುತ್ತಿದೆ. ಬಿಜೆಪಿಗರೆಲ್ಲ ಸತ್ಯ ಹರಿಶ್ಚಂದ್ರನ ಮನೆಯಲ್ಲಿ ಬಾಡಿಗೆಗಿರುವ ತರಹ ಮಾತನಾಡುತ್ತಾರೆ. 20 ವರ್ಷಗಳಿಂದ ನಾನು ಇವರ ಕಥೆ ಏನು ಅನ್ನೋದನ್ನು ನೋಡಿದ್ದೇನೆ. ಒಂದು ಬೆರಳಲ್ಲಿ ಬೇರೆಯವರನ್ನು ಗುರಿ ಮಾಡುವ ಮೊದಲು ಉಳಿದ 4 ಬೆರಳು ನಮ್ಮನ್ನು ಬೆಟ್ಟು ಮಾಡಿ ತೋರಿಸುತ್ತವೆ ಎಂಬ ಅರಿವು ಇರಲಿ ಎಂದರು.
ಮುಂದುವರೆದು, ಭಾರಿ ಬಹುಮತದಿಂದ ಆಯ್ಕೆಯಾದರೂ ಸಹ ತಮಗೆ ಮಂತ್ರಿ ಸ್ಥಾನ ಯಾಕೆ ನೀಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನನ್ನ ಕ್ಷೇತ್ರದಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಪೂರ್ಣ ವಿರಾಮ ಕೊಟ್ಟು, ನೀರಾವರಿ ಸೇರಿ ಒಳ್ಳೆಯ ಕಾರ್ಯಕ್ರಮಗಳನ್ನು ತರುವ ವಿಚಾರವಿದೆ. ಮಂತ್ರಿಯಾದರೆ ರಾಜ್ಯ ಸುತ್ತಬೇಕಾಗುತ್ತದೆ. ನನ್ನ ಕ್ಷೇತ್ರ 4-5 ವರ್ಷಗಳಿಂದ ನಿರ್ಲಕ್ಷ್ಯವಾಗಿದೆ. ಕ್ಷೇತ್ರವನ್ನು ಸರಿಮಾಡಿ ಆಮೇಲೆ ಅದರ ಬಗ್ಗೆ ಚಿಂತನೆ ಮಾಡುತ್ತೇನೆ ಎಂದರು.
ಲೋಕಸಭಾ ಚುನಾವಣೆಗೂ ಮುನ್ನ ಈ ಸರ್ಕಾರ ಬೀಳುತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ, ಬಿಜೆಪಿ-ಜೆಡಿಎಸ್ ಪಕ್ಷದ ಶಾಸಕರು ಅತಂತ್ರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವೆರಡರಲ್ಲೂ ಭವಿಷ್ಯ ಇಲ್ಲ ಎಂದು ಅವರಿಗೇ ಮನವರಿಕೆ ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಜನವರಿ 26ರ ನಂತರ ಯಾರು ಯಾರನ್ನು ಸೆಳೆಯುತ್ತಾರೆ ಅನ್ನೋದನ್ನು ನೀವೇ ಕಾದು ನೋಡಿ: ಲಕ್ಷ್ಮಣ ಸವದಿ