ಬಾಗಲಕೋಟೆ: ಸಾಲಬಾಧೆ ತಾಳದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕೆಎಸ್ಆರ್ಟಿಸಿ ಚಾಲಕ-ಕಂ-ನಿರ್ವಾಹಕ ಮೃತಪಟ್ಟಿದ್ದಾನೆ. ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಪಟ್ಟಣದ ನಿವಾಸಿ ಭೀಮಪ್ಪ ಗೊಂದಿ (44) ಮೃತ ಚಾಲಕ-ಕಂ-ನಿರ್ವಾಹಕ. ಕೊರೊನಾ ವೇಳೆ ಸರಿಯಾಗಿ ವೇತನ ಸಿಗುತ್ತಿರಲಿಲ್ಲ. ಸದ್ಯ ಕೆಎಸ್ಆರ್ಟಿಸಿ ವಿಭಾಗದಿಂದ 2 ಕಂತುಗಳಲ್ಲಿ (ಅರ್ಧ) ವೇತನ ಬರುತ್ತಿದೆ. ಈ ವೇತನ ಕುಟುಂಬ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಇದರಿಂದ ಮನನೊಂದು ಅ.30ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಹಿನ್ನೆಲೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಭೀಮಪ್ಪ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಬಾದಾಮಿ ಕೆಎಸ್ಆರ್ಟಿಸಿ ಡಿಪೋದಲ್ಲಿ ಸೇವೆ ಸಲ್ಲಿಸುತ್ತಿದ್ದ ಭೀಮಪ್ಪ ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರ ನಿಧನದಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಈ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.