ಬಾಗಲಕೋಟೆ: ಬಾಗಲಕೋಟೆಯ ಚಿಮ್ಮಡ ಗ್ರಾಮದ ಶಿವಲಿಂಗಪ್ಪ ಹಾಗೂ ಮಾಯಪ್ಪ ಸಹೋದರರು ಸಾಕಿದ್ದ ಸೂರ್ಯ ಹೆಸರಿನ ಕಿಲಾರಿ ಎತ್ತು ಬರೋಬ್ಬರಿ 11.50 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಈ ಹಿನ್ನೆಲೆ, ಮಂಗಳವಾರ ಸಂಜೆ ಚಿಮ್ಮಡ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಪ್ರೀತಿಯ ಸೂರ್ಯನನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಬೀಳ್ಕೊಟ್ಟರು.
ಶಿವಲಿಂಗಪ್ಪ ಹಾಗೂ ಮಾಯಪ್ಪ ಅವರು ಆರು ವರ್ಷಗಳ ಹಿಂದೆ 45,000 ರೂಪಾಯಿಗೆ ಈ ಕಿಲಾರಿ ಎತ್ತು ಸೂರ್ಯನನ್ನು ಖರೀದಿಸಿದ್ದರು. ಇದೀಗ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಳ್ಳಿ ಗ್ರಾಮದ ಸದಾಶಿವ ಡಂಗೆ ಅವರು ಸೂರ್ಯನನ್ನು ಖರೀದಿಸಿದ್ದಾರೆ. ಹಾಗಾಗಿ ಗ್ರಾಮಸ್ಥರೆಲ್ಲರೂ ಸೇರಿ ಸೂರ್ಯನನ್ನು ಅದ್ಧೂರಿಯಾಗಿ ಬೀಳ್ಕೊಟ್ಟರು.
ಇದನ್ನೂ ಓದಿ: ಹಾವೇರಿ: ಕರ್ತವ್ಯ ನಿರತ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳ ಮೇಲೆ ಹಲ್ಲೆ
ಸೂರ್ಯ ಕಳೆದ ಮೂರು ವರ್ಷಗಳಲ್ಲಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗಿಯಾಗಿ ಜಯಶಾಲಿಯಾಗಿದೆ. ಮೂರು ವರ್ಷಗಳಲ್ಲಿ ಅಂದಾಜು 8 ಲಕ್ಷ ರೂ., ಬೈಕ್, ಚಿನ್ನ, ಬೆಳ್ಳಿ, ಹಣ ಗೆದ್ದು ತಂದಿದೆ. ಖರೀದಿ ಮಾಡಿರುವ ಸದಾಶಿವ ಅವರ ಬಳಿ ಮತ್ತೊಂದು 9 ಲಕ್ಷದ ಕಿಲಾರಿ ಎತ್ತು ಇದೆಯಂತೆ. ಈಗ ಸೂರ್ಯ ಹಾಗೂ ತಮ್ಮ ಕಿಲಾರಿ ಎತ್ತನ್ನು ಜೋಡಿಯಾಗಿ ಸ್ಪರ್ಧೆಗೆ ಬಿಡುವ ಹುಮ್ಮಸ್ಸು ಹೊಂದಿದ್ದಾರೆ.