ಬಾಗಲಕೋಟೆ : 2023ರಲ್ಲಿ ದೇವಿ ಶಾಪದಿಂದ ಬಿಜೆಪಿ ಧೂಳೀಪಟ ಆಗಲಿದೆ. ದೇವರ ಹಾಗೂ ರೈತರ ಶಾಪದಿಂದ ಬಿಜೆಪಿ ಹೋಗುವ ಕಾಲ ಬರಬಹುದು ಎಂದು ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಅವರು ಬಾದಾಮಿ ಶ್ರೀ ಬನಶಂಕರಿ ಜಾತ್ರೆ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬಾದಾಮಿ ಶ್ರೀ ಬನಶಂಕರಿ ದೇವಿ ಜಾತ್ರೆ ಶತಮಾನದ ಇತಿಹಾಸ ಹೊಂದಿದೆ. ಭಾರತ ದೇಶ ನಂಬಿಕೆ ಮೇಲೆ, ಧಾರ್ಮಿಕ ಭಾವನೆ ಮೇಲೆ ಪರಂಪರೆಯನ್ನ ಹೊಂದಿರುವ ರಾಷ್ಟ್ರವಾಗಿದೆ.
ಎರಡು ವರ್ಷಗಳಿಂದ ಕೋವಿಡ್ ನೆಪ ಹೇಳಿ, ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ ಧಾರ್ಮಿಕ ಕಾರ್ಯಕ್ರಮಗಳು ಮತ್ತು ರೈತರ ಮೇಲೆ ಶೋಚನೀಯ ಪರಿಸ್ಥಿತಿ ನಡೆಸಿದೆ ಎಂದು ಆರೋಪಿಸಿದರು.
ಕಾನೂನು ಕಟ್ಟಳೆ ಮಾಡಿ ರೈತರನ್ನ ಮತ್ತು ಧಾರ್ಮಿಕ ಕಾರ್ಯಕ್ರಮವನ್ನ ತುಳಿಯುತ್ತಿದ್ದಾರೆ. ಧಾರ್ಮಿಕ ಆಚರಣೆ ಮಾಡಿ ದೇವಿ ಹತ್ರ ಕೇಳಿದ್ರೆ, ಸಂಪೂರ್ಣ ಕೋವಿಡ್ ನಿಯಂತ್ರಣ ಮಾಡುವ ಶಕ್ತಿ ದೇವಿಯಲ್ಲಿದೆ. ಬನಶಂಕರಿ ಜಾತ್ರೆಯಲ್ಲಿ ಭಕ್ತರನ್ನ ಹೊಡೆಯುವುದನ್ನು ನೋಡಿದರೆ, ದೇವಿ ಶಾಪದಿಂದ 2023ರ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟ ಆಗಲಿದೆ.
ಧರ್ಮದ ಆಧಾರದ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಎಲ್ಲರೂ ಅವರನ್ನ ನಂಬಿ ವೋಟ್ ಹಾಕಿದ್ದಾರೆ. ಆದರೆ, ಹಿಂದೂಗಳ ದೇವಸ್ಥಾನಗಳನ್ನ ಕೆಡವಿದ್ದು ನಮಗೆ ನೋವಾಗಿದೆ. ನೂರಕ್ಕೆ ನೂರಾವೊಂದು ಪರ್ಸೆಂಟ್ ಹಿಂದೂಗಳ ಶಾಪ ಅವರಿಗೆ ತಟ್ಟುತ್ತೆ ಎಂದರು.
ದೇವರನ್ನ ವಿರೋಧ ಮಾಡಿದವರು ಇವತ್ತಿನವರೆಗೂ ಬೆಳೆದಿಲ್ಲ. ಭಾರತ ದೇಶ ಧರ್ಮದ ತಳಹದಿಯ ಮೇಲೆ ನಿಂತಿದೆ. ಕಳೆದ ಬಾರಿ ಕೋವಿಡ್ನಲ್ಲಿ ಕೆರಕಲಮಟ್ಟಿ ಮತ್ತು ಬೆಳಗಾವಿಗೆ ಅಮಿತ್ ಶಾ ಬಂದು ಹೋಗಿದ್ದರು. ನಿಮ್ಮ ರಾಷ್ಟ್ರೀಯ ಅಧ್ಯಕ್ಷರು ಕೇಂದ್ರ ಗೃಹ ಮಂತ್ರಿಗಳು ಬಂದಾಗ ಲಕ್ಷ ಗಟ್ಟಲೆ ಜನ ಬಂದ್ರೆ ಕೊರೊನಾ ಬರೋದಿಲ್ಲವೇ ಎಂದು ಅವರು ಪ್ರಶ್ನೆ ಮಾಡಿದರು.
ಆದರೆ, ಬನಶಂಕರಿ ಜಾತ್ರೆಯಲ್ಲಿ ಜನ ಬಂದ್ರೆ ಕೊರೊನಾ ಬರುತ್ತೆ ಎಂದು ಭಕ್ತರ ಮೇಲೆ ಶೋಷಣೆ ಮಾಡೋದು ನೋವಾಗಿದೆ. ಈ ಬಾರಿಯೂ ಲಾಕ್ಡೌನ್ ಮಾಡಿದ್ರೆ ಅದರ ಪರಿಸ್ಥಿತಿ ಸಿಎಂ ಬೊಮ್ಮಾಯಿಯವರಿಗೆ ತಟ್ಟುತ್ತದೆ ಎಂದರು.
ಓದಿ: ಲಸಿಕಾಕರಣ ಚುರುಕುಗೊಳಿಸಿ: ಜಿಲ್ಲಾಡಳಿತಗಳಿಗೆ ಸಿಎಂ ಬೊಮ್ಮಾಯಿ ಸೂಚನೆ