ಬಾಗಲಕೋಟೆ: ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ ಪಾವತಿಸಲು ಜೂನ್ 30 ಗಡುವು ನೀಡಲಾಗಿದೆ. ಬಾಕಿ ಹಣ ಪಾವತಿಸದಿದ್ದಲ್ಲಿ ಜುಲೈ 1 ರಂದು ಸಕ್ಕರೆ ಜಪ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಜೂನ್ 17 ರಂದು ಸಕ್ಕರೆ ಆಯುಕ್ತರ ಆದೇಶದಂತೆ ಕಬ್ಬು ಬಾಕಿ ವಸೂಲಾತಿಗೆ ನೋಟಿಸ್ ನೀಡಲಾಗಿದೆ. ಜೂನ್ 30 ರಂದು ಸಂಜೆ 6 ಗಂಟೆಯೊಳಗಾಗಿ ಬಾಕಿ ಹಣ ಸಂಪೂರ್ಣವಾಗಿ ಪಾವತಿಸದಿದ್ದಲ್ಲಿ ಜುಲೈ 1 ರಂದು ಸಕ್ಕರೆ ಜಪ್ತಿಗೆ ಕ್ರಮ ಜರುಗಿಸುವುದಾಗಿ ತಿಳಿಸಿದರು.
2018-19ನೇ ಸಾಲಿಗೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಯವರು ಒಟ್ಟು 98,84,052.873 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, ಎಫ್‍ಆರ್‍ಪಿ ಅನ್ವಯ 28,9,863.81 ಲಕ್ಷ ರೂ ಮೊತ್ತ ಪಾವತಿಸಬೇಕಾಗಿದೆ. ಈಗಾಗಲೇ 2,74,014.62 ಲಕ್ಷ ರೂ. ಮೊತ್ತವನ್ನು ಪಾವತಿಸಿದ್ದು, 150 ಕೋಟಿ ರೂ(15,849.18 ಲಕ್ಷ) ಪಾವತಿಸಲು ಬಾಕಿ ಇರುತ್ತದೆ ಎಂದು ತಿಳಿಸಿದರು.
ಇದರ ಜೊತೆಗೆ 2017-18ನೇ ಸಾಲಿಗೆ ಹೆಚ್ಚುವರಿಯಾಗಿ ಘೋಷಿಸಿರುವ ದರ ಪಾವತಿ ಕುರಿತು ಇಐಡಿ ಪ್ಯಾರಿ ಶುಗರ್ಸ್ ಹೊರತುಪಡಿಸಿ ಉಳಿದ ಎಲ್ಲ ಕಾರ್ಖಾನೆಯವರು ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ. 2016-17ನೇ ಹಂಗಾಮಿಗೆ ಕಾರ್ಖಾನೆಯವರು ಘೋಷಿಸಿರುವ ಹೆಚ್ಚುವರಿ ದರ ಪಾವತಿ ಬಾಕಿ ಉಳಿಸಿಕೊಂಡಿರುವ ನಿರಾಣಿ ಶುಗರ್ಸ್‍ನವರು 682.66 ಲಕ್ಷ ರೂ( ಅಂದಾಜು 6ಕೋಟಿ ರೂ). ಹಾಗೂ ರನ್ನ ಶುಗರ್ಸ್ 288.89 ಲಕ್ಷ ರೂ(2 ಕೋಟಿ). ಹಾಗೂ ಇಐಡಿ ಪ್ಯಾರಿ ಇಂಡಿಯಾ 1387.84 ಲಕ್ಷ ರೂ. (13ಕೋಟಿ) ಬಾಕಿ ಉಳಿಸಿಕೊಂಡಿದ್ದು, ತುರ್ತಾಗಿ ಪಾವತಿಸಲು ತಿಳಿಸಿದರು.