ಬಾಗಲಕೋಟೆ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ತಮ್ಮ ಅಧಿಪತ್ಯ ಸಾಧಿಸುತ್ತಿದ್ದಂತೆ ಭಾರತ ಸರ್ಕಾರ ಕಾಬೂಲ್‌ನ ಭಾರತೀಯ ರಾಯಭಾರ ಕಚೇರಿ ಭದ್ರತಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡಿದೆ. ಮಂಜುನಾಥ್ ಭಾರತಕ್ಕೆ ಮರಳಿದರೂ ಅವರ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.
ಮುಧೋಳ ತಾಲೂಕಿನ ಕಸಬಾಜಂಬಗಿ ಗ್ರಾಮದ ಮಂಜುನಾಥ ಮಾಳಿ ಕಾಬೂಲ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ 2019ರಿಂದ ಕಾರ್ಯ ನಿರ್ವಹಿಸುತ್ತಿದ್ದರು. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ವಶಪಡಿಸಿಕೊಳ್ಳುತ್ತಿದ್ದಂತೆ ಕಾಬೂಲ್ನಿಂದ ಆಗಸ್ಟ್ 16ಕ್ಕೆ ದೆಹಲಿಗೆ ವಾಪಸ್ ಆಗಿದ್ದಾರೆ.
ಸದ್ಯಕ್ಕೆ ದೆಹಲಿಯಲ್ಲಿರುವ ಮಂಜುನಾಥ ಮಾಳಿ ಕ್ವಾರಂಟೈನ್ ಆಗಿದ್ದಾರೆ. ಆದರೂ ಮನೆ ಸದಸ್ಯನ ಮುಖ ನೋಡೋವರೆಗೂ ಸಮಾಧಾನ ಇಲ್ಲ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ದೆಹಲಿಯಿಂದ ಮಂಜುನಾಥ ಬೇಗ ಮನೆಗೆ ಬರಲಿ ಅಂತಾ ತಂದೆ, ತಾಯಿ, ಪತ್ನಿ ಹಾಗೂ ಕುಟುಂಬಸ್ಥರು ಕಾದು ಕುಳಿತಿದ್ದಾರೆ.