ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರವಾಗಿರುವ ಬಾದಾಮಿ ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿದಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಸುಮಾರು 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಮಾಜಿ ಸಚಿವರಾದ ಬಿ.ಬಿ.ಚಿಮ್ಮನಕಟ್ಟಿ ಅವರ ಮನೆಗಳು ಇದ್ದರೂ ಇವರು ಯಾವುದೇ ರೀತಿಯಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯಗಳನ್ನು ಮಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಮನೆಗೆ ಮನೆಗೆ ಅಂಗನವಾಡಿ ಕಾರ್ಯಕರ್ತೆಯರು ಹೋಗಿ ಸರ್ವೆ ಕಾರ್ಯ ನಡೆಸಿದ್ದಾರೆ. ಸ್ಯಾನಿಟೈಸರ್ ಸಿಂಪಡಣೆ ಕಾರ್ಯ, ಸ್ವಚ್ಛತಾ ಕಾರ್ಯ ಸೇರಿದಂತೆ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಸುಹಾಸ್ ಇಂಗಳೆ ತಿಳಿಸಿದ್ದಾರೆ. ಆದರೆ ಸ್ಥಳೀಯರು ಮಾತ್ರ ಆತಂಕ ವ್ಯಕ್ತಪಡಿಸಿದ್ದು, ಸೋಂಕು ತಡೆಗಟ್ಟಲು ಔಷಧೋಪಚಾರ ಮಾಡುತ್ತಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಮಾತ್ರೆಗಳನ್ನು ನೀಡಿಲ್ಲ. ಸೋಂಕು ಹರಡುತ್ತಿದ್ದು, ತಾಲೂಕ ಆಸ್ಪತ್ರೆ ಉನ್ನತ ಮಟ್ಟಕ್ಕೆ ಏರಿಸುವ ಜೊತೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.