ಬಾಗಲಕೋಟೆ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ಗೆ ಇನ್ನೂ ಹೀನಾಯ ಸ್ಥಿತಿ ಬರುತ್ತದೆ ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರು ವಿಶೇಷ ಫ್ಲೈಟ್ ಮಾಡಿಕೊಂಡು ಗೋವಾ, ಉತ್ತರಾಖಂಡ್ಗೆ ಹೋಗಿದ್ದರು. ಬಾಡಿಗೆ ಕೊಟ್ಟು ವಾಪಸ್ ಬಂದಿದ್ದಾರೆ. ಕಾಂಗ್ರೆಸ್ ಪರಿಸ್ಥಿತಿ ಇನ್ನೂ ಹೀನಾಯವಾಗುತ್ತದೆ. ಇಲ್ಲವಾದಲ್ಲಿ ನನ್ನ ಹೆಸರು ಗೋವಿಂದ ಕಾರಜೋಳ ಅಲ್ಲ ಎಂದು ಟಾಂಗ್ ನೀಡಿದರು.
ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ: ಐದು ರಾಜ್ಯದ ಚುನಾವಣೆ ಬರುವ ಮುನ್ನ ನಾನು ಹೇಳಿದ್ದೆ, ಈಗಲೂ ಹೇಳುತ್ತೇನೆ 2024ರ ನಂತರ ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋಕೆ ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ಇದೇ ಸಮಯದಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ನಾನು ವೈಯಕ್ತಿಕವಾಗಿ ಗಾಂಧಿ ಮನೆತನ, ನೆಹರೂ ಮನೆತನದ ಬಗ್ಗೆ ಮಾತನಾಡಲು ಹೋಗುವುದಿಲ್ಲ. ರಾಜ್ಯ ಕಾಂಗ್ರೆಸ್ ಪಕ್ಷದ ಶೀತಲಸಮರ ವಿಚಾರವಾಗಿ ಮಾತನಾಡಿ, ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ. ಚುನಾವಣೆ ಬರುವ ಹೊತ್ತಿಗೆ ಕಾಂಗ್ರೆಸ್ನಲ್ಲಿ ಮೂರು ಗುಂಪುಗಳು ಆಗುತ್ತವೆ. ಮೂರು ಗುಂಪುಗಳು ಮೂರು ದಿಕ್ಕಿಗೆ ಹೋಗುತ್ತಿವೆ ಎಂದು ವ್ಯಂಗ್ಯವಾಡಿದರು.
ಇದೇ ಸಮಯದಲ್ಲಿ, ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆದ ವಿಚಾರವಾಗಿ ಮಾತನಾಡಿ, ಈ ದೇಶದಲ್ಲಿ ಕಾಂಗ್ರೆಸ್ನನ್ನು ಬಲವಾಗಿ ನಂಬಿದವರು ಅಲ್ಪಸಂಖ್ಯಾತರು. ಅವರಿಗೂ ಪದೇ ಪದೇ ಮೋಸ ಆಗ್ತಿದೆ ಅಂತ ಗೊತ್ತಾಗಿ ದೂರ ಸರಿಯುತ್ತಿದ್ದಾರೆ.
ಬಿಜೆಪಿಗೆ ಬಂದವರು ವಲಸೆ ಹೋಗ್ತಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇದೆಲ್ಲಾ ಭ್ರಮೆ, ಯಾರೂ ಹೋಗೋದಿಲ್ಲ. ರಾತ್ರಿ ಕಂಡ ಬಾವಿಗೆ ಯಾರಾದ್ರೂ ಹಗಲು ಬಂದು ಬೀಳುತ್ತಾರೆಯೇ, ನೀರಿಲ್ಲದ ಬಾವಿ ಅಂತ ಅವರಿಗೂ ಗೊತ್ತಿದೆ. ಏನು ಆಗೋದಿಲ್ಲ. ಆದ್ರೆ ಕಾಂಗ್ರೆಸ್ ತೊರೆದು ಇನ್ನೂ ಕೆಲವರು ಹೋಗ್ತಾರೆ ಎಂದರು.
ಇದನ್ನೂ ಓದಿ:ದೇಶದ ಜನತೆ ಮೋದಿ ಮೇಲೆ ಇಟ್ಟಿರುವ ವಿಶ್ವಾಸ ಕಂಡು ಬೆರಗಾಗಿದ್ದೇನೆ : ಸಚಿವ ಪ್ರಲ್ಹಾದ್ ಜೋಶಿ
ಕಾಂಗ್ರೆಸ್ನಿಂದ ಇನ್ನೂ ಬಹಳಷ್ಟು ಜನ ಹೋಗಬಹುದು. ನಾವು ಯಾರನ್ನೂ ಸಂಪರ್ಕ ಮಾಡಲ್ಲ. ನಮ್ಮ ಬಾಗಿಲು 24 ಗಂಟೆಗಳ ಕಾಲ ಓಪನ್ ಇರುತ್ತೆ. ಯಾರು ಬೇಕಾದರೂ ಬರಬಹುದು. ಸಿದ್ದರಾಮಯ್ಯ ಕ್ಷೇತ್ರದಲ್ಲಿ ಟಿವಿ, ಫ್ರಿಡ್ಜ್ ಆಫರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ನವರು ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಆಡಳಿತ ಇದೇ ರೀತಿ ಮಾಡಿದ್ದಾರೆ. 60 ವರ್ಷದ ಅಡಳಿತದಲ್ಲಿ ಜನರಿಗೆ ಮೋಸ ಮಾಡೋದು, ಆಸೆ ಆಮಿಷವೊಡ್ಡೋದೆ ಅವರ ಪ್ರಥಮ ಕಾರ್ಯಕ್ರಮ ಎಂದು ಲೇವಡಿ ಮಾಡಿದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿ, ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶ ಬಲಾಢ್ಯವಾಗುತ್ತಿದೆ. ಬಿಜೆಪಿ ಚಿಂತನೆಗಳ ಜೊತೆಗೆ ಅವರು ಬಂದ್ರೆ ತಪ್ಪೇನಿಲ್ಲ. ರಾಜ್ಯದ ಹಿರಿಯ ರಾಜಕಾರಣಿಗಳು. ಅವರು ಬಂದ್ರೆ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ರು.