ಬಾಗಲಕೋಟೆ: ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ ಆದ ಬಳಿಕ ಇದೇ ಪ್ರಥಮ ಬಾರಿ ಜಿಲ್ಲೆಗೆ ಪ್ರವಾಸ ಹಮ್ಮಿಕೊಂಡು, ಪ್ರವಾಹ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಜಿಲ್ಲೆಗೆ ಆಗಮಿಸಿದ ಡಿಸಿಎಂ ಗೋವಿಂದ ಕಾರಜೋಳ, ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಸಭೆ ನಡೆಸಿದರು. ಕೃಷ್ಣಾ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಗಳ ಪ್ರವಾಹದಿಂದ ಹಾನಿ ಉಂಟಾಗಿರುವ ಗ್ರಾಮಗಳ ಕುರಿತು ಮಾಹಿತಿ ಪಡೆದರು. ನಿರಾಶ್ರಿತರಿಗೆ ನಿರ್ಮಾಣ ಮಾಡಿರುವ ಶೆಡ್, ವಿದ್ಯುತ್ ಸಂಪರ್ಕ ಹಾಗೂ ಪರಿಹಾರ ಧನ ಸೇರಿದಂತೆ ಇತರ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಕಲೆ ಹಾಕಿದರು.
ಸಂತ್ರಸ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಪರಿಹಾರ ಧನ, ಎಲ್ಲ ಸೌಲಭ್ಯಗಳನ್ನು ಸಂತ್ರಸ್ತರಿಗೆ ಮುಟ್ಟುವಂತೆ ನಿಗಾ ವಹಿಸಬೇಕೆಂದು ಸೂಚಿಸಿದರು. ಶಾಸಕ ಸಿದ್ದು ಸವದಿ ಹಾಗೂ ದೊಡ್ಡನಗೌಡ ಪಾಟೀಲ್ ಅವರೂ ತಮ್ಮ ಕ್ಷೇತ್ರದಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ಗಮನ ಸೆಳೆದರು. ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ಯಾರೇ ಅಪರಾಧ ಮಾಡಲಿ ಅವರಿಗೆ ಶಿಕ್ಷೆ ಆಗಲಿದೆ. ಡಿ ಕೆ ಶಿವಕುಮಾರ್ ಅವರು ಯಾವುದೇ ತಪ್ಪು ಮಾಡಿಲ್ಲವಾದಲ್ಲಿ ಅವರಿಗೆ ಇಡಿ ಅಧಿಕಾರಿಗಳು ಎನೂ ಮಾಡುವುದಿಲ್ಲ ಎಂದರು.