ಬಾಗಲಕೋಟೆ: ಕಾಂಗ್ರೆಸ್ ಮುಳುಗುವ ಹಡಗು, ಈ ಮುಳುಗುವ ಹಡಗಿನಲ್ಲಿ ಯಾರು ಕೂರ್ತಾರೆ. ಮುಂದಿನ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷವು ದಿಕ್ಕು ಇಲ್ಲದ ಮನೆಯಂತಾಗುತ್ತದೆ ಎಂದು ಜಲ ಸಂಪನ್ಮೂಲಗಳ ಸಚಿವರಾದ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ಗಾಂಧಿಯೇತರರು ಈ ಬಾರಿ ಎಐಸಿಸಿ ಅಧ್ಯಕ್ಷ ಹುದ್ದೆಗೆ ಏರುತ್ತಾರೆ? ಎಂಬ ಪ್ರಶ್ನೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೂ ಆಗಲಾರದೇ ಎಷ್ಟು ವರ್ಷ ಆಯಿತು. ಇಲ್ಲಿಯವರೆಗೂ ಯಾರೂ ಆಗಲಿಕ್ಕೂ ತಯಾರಿಲ್ಲ. ಮುಳುಗುವ ಹಡಗಿನಲ್ಲಿ ಕೂರಲು ಯಾರು ತಯಾರಿರ್ತಾರೆ ಹೇಳಿ ಎಂದರು.
ಇದೇ ಸಮಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತನಾಡಿ, ನೂರು ಸಿದ್ದರಾಮಯ್ಯನವರು ಬಂದರೂ ಬಿಜೆಪಿ ಭಯಪಡುವ ಪ್ರಶ್ನೆಯೇ ಇಲ್ಲ. ನಾವು ಒಬ್ಬರೇ ಶಾಸಕರಿದ್ದಾಗಲೂ ಭಯಪಟ್ಟಿಲ್ಲ, ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಹೋರಾಟ ಮಾಡಿ ಗೆದ್ದಿದ್ದೇವೆ. ಬಿಜೆಪಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿದೆ. ಕಾಂಗ್ರೆಸ್ಗಿಂತ ಹೆಚ್ಚು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದದ್ದು ಬಿಜೆಪಿ ಪಕ್ಷ ಎಂದರು.
ಇದನ್ನೂ ಓದಿ: ಆರೋಪ ಮಾಡಿ ಹಿಟ್ ಆ್ಯಂಡ್ ರನ್ ಕೆಲಸ ಮಾಡಬಾರದು: ಸಚಿವ ಕಾರಜೋಳ
ನನ್ನನ್ನೇ ಟಾರ್ಗೆಟ್ ಮಾಡ್ತಾರೆ ಅಂತ ಸಿದ್ದರಾಮಯ್ಯ ಹೇಳಿದರೆ ನಾನೇನು ಮಾಡಲಿಕ್ಕಾಗುತ್ತೆ ಎಂದ ಕಾರಜೋಳ, ಸಿದ್ದರಾಮಯ್ಯ ಅವರನ್ನ ಟಾರ್ಗೆಟ್ ಮಾಡುವ ಪ್ರಶ್ನೆಯೇ ಇಲ್ಲ. ಮೈಸೂರಿನವರು ಸಿದ್ದು 30 ವರ್ಷದ ರಾಜಕಾರಣ ಮಾಡಿದ್ದನ್ನ ನೋಡಿ ಜನರು ಅವರನ್ನ ಸೋಲಿಸಿದ್ದನ್ನ ನೋಡಿದ್ದೀವಿ. ಜನ ಬಹಳ ಬುದ್ದಿವಂತರಿದ್ದಾರೆ. ಪ್ರತಿಯೊಬ್ಬರ ಮತ್ತು ಪಕ್ಷಗಳ ಕಾರ್ಯ ಶೈಲಿ ತೂಗಿ ಅಳೆದು ನೋಡಿ ಜನ ಮತ ಹಾಕುತ್ತಾರೆ ಎಂದರು.
ಸಿದ್ದರಾಮೋತ್ಸವ ಮೂಲಕ ಸಿದ್ದು ಮುಂದಿನ ಸಿಎಂ ತಾವೇ ಎಂಬ ಬಿಲ್ಡಪ್ ತಗೋತ್ತಿದ್ದಾರಾ? ಎಂಬ ಪ್ರಶ್ನೆಗೆ ಕಾರಜೋಳ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ನಲ್ಲಿ ಮೂರು ಗುಂಪುಗಳಾಗಿವೆ. ಸಿದ್ದರಾಮಯ್ಯ ಅವರ ಒಂದು ಗುಂಪಿದೆ. ಡಿಕೆ ಶಿವಕುಮಾರ್ ಅವರ ಒಂದು ಗುಂಪಿದೆ. ವೀರಶೈವರನ್ನು ಕಾಂಗ್ರೆಸ್ ಕಡೆಗಣಿಸಿದ್ದಾರೆ ಎಂದು ಹೇಳಿ, ಶಾಮನೂರು ಶಿವಶಂಕರಪ್ಪನವರನ್ನ ಹಿಡಿದುಕೊಂಡು ಕೆಲವರು ಓಡಾಡ್ತಿದಾರೆ. ರಾಜಕಾರಣದಲ್ಲಿ ಮತದಾರರೇ ಮಾಲೀಕರು, ಯಾರು ಬೇಕು ಅಂತ ಜನ ತೀರ್ಮಾನ ಮಾಡುತ್ತಾರೆ ಎಂದರು.
ಇದನ್ನೂ ಓದಿ:ಪೇ ಸಿಎಂ ಕೀಳುಮಟ್ಟದ ಅಭಿಯಾನ: ಕೆ.ಎಸ್ ಈಶ್ವರಪ್ಪ
ಇದೇ ಸಮಯದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನ ವಿರುದ್ಧ ಸಚಿವ ಕಾರಜೋಳ ಹರಿಹಾಯ್ದು ಶೇ 40ರಷ್ಟು ಕಮಿಷನ್ ವಿಚಾರವಾಗಿ ಮಾತನಾಡಿ, ಈ ರೀತಿ ವ್ಯಕ್ತಿಗತ ಆರೋಪ ಮಾಡಿದ್ದು ಸರಿಯಲ್ಲ. ಕೆಂಪಣ್ಣ ಕಾಂಟ್ರ್ಯಾಕ್ಟರೇ ಅಲ್ಲ. 20 ವರ್ಷದಿಂದ ಆತ ಯಾವುದಾದ್ರೂ ಕೆಲಸ ತಗೊಂಡಿದ್ರೆ ತೋರಿಸಿ. ಇಂತಹ ವ್ಯಕ್ತಿಗೆ ಕಮಿಷನ್ ಕೊಟ್ಟೆ ಅಂತ ಕೆಂಪಣ್ಣ ಹೇಳಲಿ ಎಂದು ಕಾರಜೋಳ ಅವರು ಸವಾಲು ಹಾಕಿದರು.
ತನಿಖಾ ಸಂಸ್ಥೆ ನೋಟಿಸ್ ಕೊಟ್ಟರೂ ಬಂದು ಯಾವುದೇ ಹೇಳಿಕೆ ಕೊಡಲಿಲ್ಲ. ದೆಹಲಿಯಿಂದಲೂ ತನಿಖೆಗೆ ಕರೆದರೆ ಕೆಂಪಣ್ಣ ಬರಲಿಲ್ಲ. ಏನೂ ಹೇಳೋದಿಲ್ಲ, ಸುಮ್ನೆ ಸುಳ್ಳು ಆರೋಪ ಮಾಡಿ ಹೋಗುತ್ತಾನೆ. ಇದು ರಾಜಕೀಯ ಪ್ರೇರಿತ ಆರೋಪ, ಕಾಂಗ್ರೆಸ್ ನಾಯಕರು ಕೆಂಪಣ್ಣನ ಟೂಲ್ ಆಗಿ ಉಪಯೋಗ ಮಾಡಿಕೊಂಡಿದ್ದಾರೆ. ಅದರ ಪರಿಣಾಮ ಅವನ ಮುಪ್ಪಿನ ಕಾಲದಲ್ಲಿ ಕೆಟ್ಟದ್ದನ್ನು ಎದುರಿಸಬೇಕಾಗುತ್ತದೆ ಎಂದರು.
ಇದನ್ನೂ ಓದಿ: ಪೇಸಿಎಂ ಅಂದ್ರೆ, ಪೇ ಕಾಂಗ್ರೆಸ್ ಮೇಡಂ ಎಂದರ್ಥ: ಪ್ರತಾಪ್ ಸಿಂಹ ವಾಗ್ದಾಳಿ
ಪೇ ಸಿಎಂ ಅಭಿಯಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಸುಳ್ಳು ಆರೋಪವನ್ನ ಸತ್ಯ ಮಾಡಲು ಹೊರಟಿದೆ. ಸಿಎಂ ವಿರುದ್ಧ ಪೇಸಿಎಂ ಅಂತ ಆರೋಪ ಮಾಡಿದ್ರೆ ಗೌರವ ಬರುತ್ತಾ? ಎಂದು ಪ್ರಶ್ನೆ ಮಾಡಿ, ಕಾಂಗ್ರೆಸ್ ಆರೋಪಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ. ಜನ ಇನ್ನೂ ಬುದ್ದಿ ಕಲಿಸ್ತಾರೆ, ಕಾಂಗ್ರೆಸ್ ಇನ್ನೂ ಹೀನಾಯ ಸ್ಥಿತಿ ತಲುಪುತ್ತೆ, ಕಾಂಗ್ರೆಸ್ ಪಕ್ಷ ಅಷ್ಟೇ ಅಲ್ಲ, ಬಿಜೆಪಿ ಸೇರಿದಂತೆ ಯಾರೇ ಆದರೂ ಈ ಮಟ್ಟಕ್ಕೆ ಇಳಿಯಬಾರದು. ಇದರಿಂದ ನೈತಿಕತೆಯ ಪತನ ಆಗುತ್ತದೆ. ಆಡಳಿತ ಮಾಡುವವರ ವಿರುದ್ಧ ಸುಳ್ಳು ಆರೋಪ ಮಾಡಬಾರದು ಎಂದರು.
ಮುಂಬರುವ ಚುನಾವಣೆಗೆ ಕ್ಷೇತ್ರ ಬದಲಾವಣೆ ಕುರಿತು ಸ್ಪಷ್ಟನೆ ನೀಡಿ, ಮುಧೋಳ ಮತಕ್ಷೇತ್ರ ಬದಲಾವಣೆ ಪ್ರಶ್ನೆಯೇ ಇಲ್ಲ. ಯಾರೂ ಊಹಾಪೋಹ ಹುಟ್ಟಿಸುತ್ತಿದ್ದರೋ ನನಗೆ ಗೊತ್ತಿಲ್ಲ. ನನ್ನ ರಾಜಕೀಯ ತೀರ್ಮಾನವನ್ನ ನಮ್ಮ ಪಕ್ಷ ತೀರ್ಮಾನ ಮಾಡುತ್ತೆ. ನಾನು ಮುಧೋಳ ಬಿಟ್ಟು ಬೇರೆ ಎಲ್ಲೂ ಚುನಾವಣೆ ಎದುರಿಸೋದಿಲ್ಲ. ಪಕ್ಷಕ್ಕೆ ಕೆಲಸ ಮಾಡಿ ಅಂತ ಪಾರ್ಟಿ ಹೇಳಿದ್ರೂ ಅದಕ್ಕೆ ನಾನು ಸಿದ್ಧವಾಗಿದ್ದೇನೆ. ನನ್ನ ಕೊನೆಯ ಉಸಿರು ಇರೋವರೆಗೂ ಮುಧೋಳ ನಂಟು ಇರುತ್ತೆ, ನಾನೆಲ್ಲೂ ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದರು.