ಬಾಗಲಕೋಟೆ : ನಾಳೆಯಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಗಳಿಗೆ ಸ್ವಾಮೀಜಿಗಳೊಂದಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಎಚ್ಚರಿಕೆ ರವಾನಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೇ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತರಬೇಕು. ಕೆಲವೊಂದಿಷ್ಟು ಜಾತಿಯ ಮುಖಂಡರು ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ, ದೇಶದ್ರೋಹಿ ಚಟುವಟಿಕೆಗಳನ್ನು ನಿಲ್ಲಿಸುವುದಗೋಸ್ಕರ ಈ ಕಾನೂನನ್ನು ಜಾರಿಗೆ ತರಲೇಬೇಕು. ಇಲ್ಲದಿದ್ದರೇ ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಘೇರಾವ್ ಹಾಕುತ್ತೇವೆ ಎಂದರು.
ಧರ್ಮ ದ್ರೋಹಿಗಳಾಗಬೇಡಿ : ಇದೇ ಸಮಯದಲ್ಲಿ ಮತಾಂತರ ಕಾಯ್ದೆ ವಿರೋಧಿಸುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ನವರಿಗೆ ದೇಶ, ಧರ್ಮದ ಬಗ್ಗೆ ಕಾಳಜಿ ಇಲ್ಲ. ಸೋನಿಯಾ ಗಾಂಧಿ ಖುಷಿ ಮಾಡೋಕೆ ಹೀಗೆ ಹೇಳುತ್ತಾರೆ. ಮತಾಂತರಕ್ಕೆ ಬೆಂಬಲ ನೀಡುವವರನ್ನು ನುಂಗಿ ಹಾಕುತ್ತೇವೆ. ಈಗಾಗಲೇ ಗೂಳಿಹಟ್ಟಿ ಶೇಖರ್ ಮನೆಯೊಳಗೆ ಹೋದಂತೆ ನಿಮ್ಮ ಮನೆಯಲ್ಲೂ ಬರ್ತಾರೆ, ಇದನ್ನ ನೆನಪಿಟ್ಟುಕೊಳ್ಳಿ. ಧರ್ಮ ದ್ರೋಹಿಗಳಾಗಬೇಡಿ ಎಂದು ಕಿಡಿಕಾರಿದರು.
ಮತಾಂತರ ಷಡ್ಯಂತ್ರ : ಲಿಂಗಾಯತ ಮತಾಂತರ ಕುರಿತು ಪ್ರತಿಕ್ರಿಯೆ ನೀಡಿ, ಇಲ್ಲಿಯವರೆಗೆ ಹಿಂದುಳಿದ ವರ್ಗದವರು ಮಾತ್ರ ಮತಾಂತರ ಆಗ್ತಿದ್ರು. ಈಗ ಲಿಂಗಾಯತರು, ಕುರುಬರು, ಗೌಡರು, ಬ್ರಾಹ್ಮಣರು, ಆರ್ಯ-ವೈಶ್ಯ ಸಮಾಜದವರೂ ಬೇರೆ ಧರ್ಮಕ್ಕೆ ಹೋಗುತ್ತಿದ್ದಾರೆ. ಮತಾಂತರ ಷಡ್ಯಂತ್ರ ನಡೆಯುತ್ತಿದೆ. ಕೋಲಾರದಲ್ಲಿ 50 ಸಾವಿರ ಕುರುಬ ಜನರು ಮತಾಂತರ ಆಗಿದ್ದಾರೆ. ದಾವಣಗೆರೆ 1 ಲಕ್ಷಕ್ಕೂ ಹೆಚ್ಚು ಲಿಂಗಾಯತರು ಮತಾಂತರ ಆಗಿದ್ದಾರೆ. ಎಲ್ಲ ಕಡೆಗೂ ಹೀಗೆಯೇ ನಡೆಯುತ್ತಿದೆ. ಕಾನೂನು ಮೂಲಕ ಇದನ್ನ ತಡೆಯಬೇಕು ಹಾಗೂ ಜಾಗೃತಿ ಮೂಡಿಸಬೇಕಿದೆ ಎಂದರು.
ಮಠ ಬಿಟ್ಟು ಹೊರಗೆ ಬನ್ನಿ : ಸ್ವಾಮೀಜಿಗಳು ಮಠ ಬಿಟ್ಟು ಹೊರಗಡೆ ಬರಬೇಕು. ಮಠದೊಳಗಡೆ ಇದ್ರೆ ನಿಮ್ಮ ಪಾದಪೂಜೆಗೂ ಸಹ ಜನ ಸಿಗೋದಿಲ್ಲ. ಮೀಸಲಾತಿ ಮತ್ತು ಸಿಎಂ ರಕ್ಷಣೆಗೆ ನಿಮ್ಮ ಮಠಗಳಿಲ್ಲ. ಮಠಗಳು ಸಮಾಜದ ರಕ್ಷಣೆಗೋಸ್ಕರ ಹೊರಬರಬೇಕು ಎಂದು ಮುತಾಲಿಕ್, ಸ್ವಾಮೀಜಿಗಳಿಗೆ ಕಿವಿಮಾತು ಹೇಳಿದರು.