ಬಾಗಲಕೋಟೆ: ಹಳೇ ನಗರದ ಸೀಲ್ಡೌನ್ ಪ್ರದೇಶದಲ್ಲಿ ತಿರುಗಾಡುತ್ತಿದ್ದುದ್ದನ್ನು ಪ್ರಶ್ನಿಸಿದ್ದಕ್ಕೆ ನಗರಸಭೆ ಮಾಜಿ ಸದಸ್ಯ ಗೋವಿಂದ ಬಳ್ಳಾರಿ ಅಧಿಕಾರಿಗಳ ವಿರುದ್ಧ ಉದ್ಧಟತನದ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಲ್ಲದೇ ಹಿರಿಯ ಅಧಿಕಾರಿಗೆ ಬಾಯಿಗೆ ಬಂದಂತೆ ಬೈದು, ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ಕೋವಿಡ್-19 ವಿಶೇಷ ಅಪರ ಜಿಲ್ಲಾಧಿಕಾರಿ ಆಗಿರುವ ಸೋಮಣ್ಣ ಅವರಿಗೆ ಏಕವಚನ ಪದ ಪ್ರಯೋಗ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಪಕ್ಕದಲ್ಲೇ ಪೊಲೀಸರು ಇದ್ದರೂ ಮಾಜಿ ಸದಸ್ಯನ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.
ಅದೇ ಸಾಮಾನ್ಯ ಜನರು, ರೈತರು, ಬಡಪಾಯಿಗಳು ಇದ್ದಿದ್ದರೆ ಲಾಠಿ ಬೀಸಿ, ಬಸ್ಕಿ ಹೊಡೆಸಿ ಬೆದರಿಸುತ್ತಿದ್ದ ಪೊಲೀಸರು, ಜಿಲ್ಲಾಡಳಿತದ ಒಬ್ಬ ಹಿರಿಯ ಅಧಿಕಾರಿಗೆ ರಸ್ತೆ ಮಧ್ಯೆ ಆವಾಜ್ ಹಾಕಿದ್ರೂ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಜನಸಾಮಾನ್ಯರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೆ ಮತ್ತೊಂದು ನ್ಯಾಯ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.