ಬಾಗಲಕೋಟೆ: ಅ.22ರೊಳಗಾಗಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೇ ಮುಖ್ಯಮಂತ್ರಿಗಳ ಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾಂವನಲ್ಲಿನ ಅವರ ಮನೆ ಮುಂದೆ ಹೋರಾಟ ನಡೆಸುತ್ತೇವೆ ಎಂದು ರಾಷ್ಟ್ರೀಯ ಪಂಚಮಸಾಲಿ ಸಮಾಜದ ಅಧ್ಯಕ್ಷ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎಚ್ಚರಿಕೆ ನೀಡಿದ್ದಾರೆ.
ನವನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಕೂಡಲ ಸಂಗಮದಿಂದ ಬೆಂಗಳೂರಿನವಗೆ 30 ದಿನಗಳ ಕಾಲ ಪಾದಯಾತ್ರೆ, ನಂತರ 23 ದಿನಗಳ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದೇವೆ.
ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಮೀಸಲಾತಿ ಹೋರಾಟವನ್ನು ನಿಲ್ಲಿಸಿದ್ದೇವೆ. ಆದರೆ, ಈವರಗೆ ಮೀಸಲಾತಿ ಘೋಷಣೆ ಮಾಡಿಲ್ಲ. ನಿಗದಿತ ಕಾಲಾವಧಿಯಲ್ಲಿ ಮೀಸಲಾತಿ ನೀಡದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಮೀಸಲಾತಿ ನಮ್ಮ ಬೇಡಿಕೆ: ಧರಣಿ ಸತ್ಯಾಗ್ರಹದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ, ಮಾಜಿ ಶಾಸಕ ಎಂ.ಪಿ ನಾಡಗೌಡ, ವಿನಯ ಕುಲಕರ್ಣಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಮೀಸಲಾತಿ ನಮ್ಮ ಬೇಡಿಕೆ. ಬೇರೆ ಸಮಾಜದವರಿಗೆ ನಾವು ವಿರೋಧಿಗಳಲ್ಲ. ನಮ್ಮ ಮಕ್ಕಳ ಶೈಕ್ಷಣಿಕ, ಉದ್ಯೋಗಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆ. ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳಿಗೆ ಮೀಸಲಾತಿ ನೀಡಬೇಕು. ಮುಖ್ಯಮಂತ್ರಿಗಳು ಬೇಡಿಕೆಯನ್ನು ಈಡೇರಿಸಿದರೆ ಅವರಿಗೆ ಸನ್ಮಾನ ಇಲ್ಲವೇ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.
ಗುಡೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೊಡ್ಡನಗೌಡ ಪಾಟೀಲ ಅವರ ಮೇಲೆ ಕಲ್ಲು ತೂರಾಟ ಘಟನೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರ ಬಗ್ಗೆ ಹೆಚ್ಚು ಏನು ಮಾತನಾಡುವುದಿಲ್ಲ ಎಂದರು.
ನಿರಾಣಿ ಸಿಎಂ ಆಗೋಕೆ ಸಮಾಜ ಒಪ್ಪಲ್ಲ: ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ ಆರ್.ನಿರಾಣಿ ಮುಂದಿನ ಸಿಎಂ ಎನ್ನುವ ಪೋಸ್ಟರ್ ವೈರಲ್ ಆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿರಾಣಿ ಅವರು ಮುಖ್ಯಮಂತ್ರಿ ಆಗಲು ನಮ್ಮ ಪಂಚಮಸಾಲಿ ಸಮಾಜ ಒಪ್ಪುವುದಿಲ್ಲ. ಪಂಚಮಸಾಲಿ ಸಮಾಜಕ್ಕೆ ದುಡಿದವರು ಯಾರೇ ಮುಖ್ಯಮಂತ್ರಿ ಆದರೂ ನಾವು ಒಪ್ಪಿಕೊಳ್ಳುತ್ತೇವೆ.
ಸಮಾಜದೊಂದಿಗೆ ದೂರ ಇರುವ ಹಾಗೂ ಮೀಸಲಾತಿಗೆ ವಿರೋಧ ವ್ಯಕ್ತಪ ಡಿಸುತ್ತಿರುವವರನ್ನು ಮುಖ್ಯಮಂತ್ರಿ ಆಗಲು ನಮ್ಮ ಸಮಾಜ ಎಂದಿಗೂ ಒಪ್ಪುವುದಿಲ್ಲ. ಸಮಾಜಕ್ಕೆ ಕೊಡುಗೆ ನೀಡಿದವರನ್ನು ಹಾಗೂ ಮೀಸಲಾತಿಗೆ ಬೆಂಬಲ ವ್ಯಕ್ತಪಡಿಸುತ್ತಿರುವವರಿಗೆ ನಮ್ಮ ಸಮಾಜ ಬೆಂಬಲಕ್ಕೆ ನಿಲ್ಲುತ್ತದೆ ಎಂದರು.
ಸಚಿವ ಮುರಗೇಶ ನಿರಾಣಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಜಮಖಂಡಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟದಿಂದ ನಡೆದ ರಕ್ತದಾನ ಶಿಬಿರದಲ್ಲಿ ಸ್ವಾಮೀಜಿಗಳು ರಕ್ತದಾನ ಮಾಡಿದ್ದಾರೆಂದು ಕೇಳಿದ ಪ್ರಶ್ನೆಗೆ, ಆ ಸ್ವಾಮೀಜಿಗಳು ರಕ್ತ ದಾನವಾದರೂ ಮಾಡಲಿ ದೇಹ ದಾನವಾದರೂ ಮಾಡಲಿ ಎಂದು ಕಾಶಪ್ಪನವರ್ ವ್ಯಂಗ್ಯ ವಾಡಿದರು.
ಇದನ್ನೂ ಓದಿ: ಪಂಚಮಸಾಲಿ ಸಮುದಾಯ ನಿರ್ಲಕ್ಷಿಸಿದರೆ ತೊಂದರೆ ಅನುಭವಿಸಬೇಕಿದೆ:ಬಸವಜಯ ಮೃತ್ಯುಂಜಯ ಶ್ರೀ ವಾರ್ನಿಂಗ್