ಬಾಗಲಕೋಟೆ: ಕಳೆದ ವಾರ ಮಾಜಿ ಸಚಿವೆ ಉಮಾಶ್ರೀ ಮನೆಯ ಬೀಗ ಮುರಿದು ಕಳ್ಳತನ ಎಸಗಿದ್ದ ಕಳ್ಳರನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಇಲ್ಲದ ಸಂದರ್ಭ ನೋಡಿಕೊಂಡು ಮನೆಯ ಬೀಗ ಮುರಿದು ಕಳ್ಳತನ ಮಾಡಿರುವುದಾಗಿ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಮಖಂಡಿ ಪಟ್ಟಣದ ನಿವಾಸಿ ಯಲ್ಲಪ್ಪ ಈರಪ್ಪ ಗಡ್ಡಿ, ಮುಧೋಳ ನಿವಾಸಿ ದುರ್ಗಪ್ಪ ಫಕೀರಪ್ಪ ವಾಲ್ಮೀಕಿ ಎಂಬುವ 23 ವಯಸ್ಸಿನ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 1,94,400 ರೂಪಾಯಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಯಲ್ಲಪ್ಪ ಗಡ್ಡಿ ಎಂಬ ಆರೋಪಿಯು ಈ ಹಿಂದೆ ಬಾಗಲಕೋಟೆಯ ನವನಗರ, ಬೀಳಗಿ, ಬೆಳಗಾವಿ ಹಾಗೂ ಚಿಕ್ಕೊಡಿ ಸೇರಿದಂತೆ ವಿವಿಧ ಪ್ರದೇಶದಲ್ಲಿ ಕಳ್ಳತನ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಅಂತರ ಜಿಲ್ಲಾ ಆರೋಪಿ ಆಗಿರುವ ಈತ ಇತ್ತೀಚೆಗಷ್ಟೇ ವಿಜಯಪುರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ.
ಇನ್ನೂ ದುರ್ಗಪ್ಪ ವಾಲ್ಮೀಕಿ ಎಂಬುವ ಆರೋಪಿ ಸಹ ಮುಧೋಳ ತಾಲೂಕಿನ ನಿವಾಸಿಯಾಗಿದ್ದು, ಈತನ ಮೇಲೆಯೂ ಕಳ್ಳತನ ಆರೋಪಗಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿರುವ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.