ಬಾಗಲಕೋಟೆ : ಅಹಿಂದ ಸಂಘಟನೆ ಬಗ್ಗೆ ಕೇಳುತ್ತಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದ ಘಟನೆ ಬಾದಾಮಿಯಲ್ಲಿ ನಡೆಯಿತು. ಅಹಿಂದ ಅಲ್ಲಪ್ಪ ಅದು ಹಿಂದುಳಿದ ಜಾತಿಗಳ ಒಕ್ಕೂಟ, ಅಹಿಂದಕ್ಕೂ ಹಿಂದುಳಿದ ಜಾತಿಗಳ ಒಕ್ಕೂಟಕ್ಕೂ ವ್ಯತ್ಯಾಸ ಇಲ್ವಾ ಎಂದು ಪ್ರಶ್ನೆ ಮಾಡಿದರು. ನಾಳೆ ನಡೆಯುವ ದಾವಣಗೆರೆ ಸಮಾವೇಶ ದಲ್ಲಿ ಭಾಗವಹಿಸುತ್ತೇನೆ. ಸಮಾವೇಶದಲ್ಲಿ ಯಾರೂ ಭಾಗಿ ಆಗುತ್ತಾರೆ ಎಂಬುದು ಮಾಹಿತಿ ಇಲ್ಲ ಎಂದರು.
ಇದೇ ಸಮಯದಲ್ಲಿ ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದು ಅವರು, ಬಿಜೆಪಿ ಹಾಗೂ ಆರ್ಎಸ್ಎಸ್ನವರ ಸಂಸ್ಕೃತಿ ತಾಲಿಬಾನ್ ಸಂಸ್ಕೃತಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಯಾರಿಂದ ಮಹಾತ್ಮ ಗಾಂಧೀಜಿ ಅವರ ಹೋರಾಟದಿಂದ ಆರ್ಎಸ್ಎಸ್ ಹಾಗೂ ಗೋಡ್ಸೆಯಿಂದಲ್ಲ. ದೇಶಕ್ಕಾಗಿ ಬಿಜೆಪಿ ಅಥವಾ ಆರ್ಎಸ್ಎಸ್ನವರು ಒಬ್ಬರಾದರು ಸತ್ತಿದ್ದಾರಾ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಮನುಷ್ಯತ್ವದಲ್ಲಿ ನಂಬಿಕೆ ಇಲ್ಲ: ಸಿದ್ದು
ಪ್ರಜಾಪ್ರಭುತ್ವದಲ್ಲಿ ಯಾರಿಗೆ ನಂಬಿಕೆ ಇಲ್ವೋ ಅವರೆಲ್ಲ ತಾಲಿಬಾನ ಸಂಸ್ಕೃತಿಯವರು. ಮನುಷ್ಯತ್ವ ಇಲ್ಲದವರು, ರಾಕ್ಷಸ ಪ್ರವೃತಿ ಹೊಂದಿದವರು ಎಲ್ಲರೂ ತಾಲಿಬಾನಿಗಳು. ಬಿಜೆಪಿ ಪಕ್ಷದವರಿಗೆ ಮನುಷ್ಯತ್ವದಲ್ಲಿ ನಂಬಿಕೆ ಇಲ್ಲದವರು, ಪ್ರಜಾಪ್ರಭುತ್ವ ದಲ್ಲಿ ನಂಬಿಕೆ ಇದೆಯಾ ಅವರಿಗೆ, ಸಂವಿಧಾನದಲ್ಲಿ ನಂಬಿಕೆ ಇಲ್ವಾ ಅವರಿಗೆ, ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದು, ಆ ಪ್ರಕಾರ ಆಡಳಿತ ಮಾಡಿ ಎಂದು. ಆದರೆ, ಬಿಜೆಪಿಯವರು ಸಂವಿಧಾನದ ಪ್ರಕಾರ ಆಡಳಿತ ಮಾಡಲ್ಲ. ಹೀಗಾಗಿ ಅವರಿಗೆ ತಾಲಿಬಾನಿಗಳು, ಹಿಟ್ಲರ್ ಸಂಸ್ಕೃತಿ ಇರುವವರು ಎಂದು ಹೇಳುವುದು ಎಂದು ಸಿ ಟಿ ರವಿ ಅವರಿಗೆ ತಿರುಗೇಟು ನೀಡಿದರು.
ಅಧಿವೇಶನದಲ್ಲಿ ಚರ್ಚಿಸಲು ಜಾತಿ ಸಮೀಕ್ಷೆ ಸೇರಿದಂತೆ ಅನೇಕ ವಿಷಯ ಕೊಟ್ಟಿದ್ದೆ, ಆದರೆ ಚರ್ಚೆಗೆ ಬರಲಿಲ್ಲ. ಚಳಿಗಾಲ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು,ಅಧಿವೇಶನ ಇನ್ನು 15 ದಿನ ಮುಂದೆ ಹಾಕಿ ಅಂದ್ರೆ ಕೇಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.