ಬಾಗಲಕೋಟೆ: ಮಗನ ಸಾವಿನ ಸುದ್ದಿ ತಿಳಿದ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿ ನಡೆದಿದೆ. ಮಗ ದಶರಥ ದುರ್ವೆ (60), ತಾಯಿ ಶಾವಕ್ಕ ದುರ್ವೆ (90) ಮೃತ ದುರ್ದೈವಿಗಳಾಗಿದ್ದಾರೆ. ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೀಡಾಗಿದ್ದ ದಶರಥ, ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಮೃತ ಪಟ್ಟಿದ್ದರು.

ಮಗನ ಸಾವಿನ ಸುದ್ದಿ ತಿಳಿದ ತಾಯಿ ಶಾವಕ್ಕ ಹೃದಯಾಘಾತವಾಗಿ ಮೃತ ಪಟ್ಟಿದ್ದಾರೆ. ಇದರೊಂದಿಗೆ ತಾಯಿ-ಮಗ ಇಬ್ಬರೂ ಸಾವಿನಲ್ಲೂ ಒಂದಾಗಿದ್ದಾರೆ. ತಾಯಿ-ಮಗನ ಸಾವಿನಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಇಬ್ಬರ ಅಂತ್ಯಕ್ರಿಯೆಯನ್ನು ಒಂದೇ ಸ್ಥಳದಲ್ಲಿ ನೆರವೇರಿಸಿದ್ದಾರೆ. ಇನ್ನು ಅಂತ್ಯಕ್ರಿಯೆಯಲ್ಲಿ ಭಾಗಿವಹಿಸಿದ ಕುಟುಂಬ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ತಾಯಿ-ಮಗನ ಸಾವಿಗೆ ಕಂಬನಿ ಮಿಡಿದಿದ್ದಾರೆ.
ರಸ್ತೆ ಅಪಘಾತದಲ್ಲಿ ಮಗ ಸಾವು, ಮಗನ ಸಾವಿನ ಸುದ್ದಿ ತಿಳಿದು ತಂದೆ ಆತ್ಮಹತ್ಯೆ(ಯಾದಗಿರಿ): ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಮುಖಮುಖಿ ಡಿಕ್ಕಿಯಾಗಿ ಬೈಕ್ ಸಾವರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮದ್ರಿಕಿ ಗ್ರಾಮದ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ. ಶಿವಕುಮಾರ ಸಮ್ಮಣಿ (24) ಮೃತಪಟ್ಟ ಯುವಕ. ಇನ್ನು ಮಗನ ಸಾವಿನ ಸುದ್ದಿ ತಿಳಿದ ಮೃತ ಯುವಕನ ತಂದೆ ಬಸವರಾಜ ಸಮ್ಮಣಿ (52) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕೆಎಸ್ಡಿಎಲ್ ನಿಗಮದ ಅಧಿಕಾರಿಗಳ ವಿರುದ್ಧ ಒಂದು ತಿಂಗಳ ಹಿಂದೆಯೇ ದೂರು ದಾಖಲು: ತನಿಖೆ ಚುರುಕು
ಶುಕ್ರವಾರ ತಡರಾತ್ರಿ ಶಿವಕುಮಾರ ಶಹಾಪುರದಿಂದ ಮದ್ರಿಕಿಗೆ ಹೋಗುವ ವೇಳೆ ದಾರಿ ಮಧ್ಯೆ ಟ್ರ್ಯಾಕ್ಟರ್ ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದೆ. ಮಗನ ಸಾವಿನ ಸುದ್ದಿ ತಿಳಿದ ತಂದೆ ಬಸವರಾಜ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್ ಸಮೇತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತಂದೆ-ಮಗನ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಶಹಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಊಟದ ವಿಚಾರವಾಗಿ ಜಗಳವಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ತಾಯಿ-ಮಗ: ಈ ಹಿಂದೆ ರಾಮನಗರ ಜಿಲ್ಲೆಯಲ್ಲಿ ಕ್ಷುಲಕ ಕಾರಣಕ್ಕೆ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ನಡೆದಿತ್ತು. ಕುಮಾರಸ್ವಾಮಿ ಲೇಜೌಟ್ನಿವಾಸಿಗಳಾದ ವಿಜಯಲಕ್ಷ್ಮಿ(50) ಮತ್ತು ಹರ್ಷ(25)ಎಂಬುವವರು ಸಾವಿಗೆ ಶರಣಾಗಿದ್ದರು. ತಾಯಿ ವಿಜಯಲಕ್ಷ್ಮಿ ಜೊತೆ ಊಟದ ವಿಚಾರವಾಗಿ ಮಗ ಹರ್ಷ ಜಗಳವಾಡಿದ್ದ. ಈ ಕಾರಣಕ್ಕೆ ಮನನೊಂದ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದರು. ಇದರಿಂದ ಮನನೊಂದ ಹರ್ಷ, ನಾನೇ ತಾಯಿ ಸಾವಿಗೆ ಕಾರಣನಾದೆ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದ ಎಂದು ವರದಿಯಾಗಿತ್ತು.
ಇದನ್ನೂ ಓದಿ:ಗುಡಿಸಲಿಗೆ ತಗುಲಿದ ಬೆಂಕಿ, ವ್ಯಕ್ತಿ-ಕುರಿ ಸಜೀವ ದಹನ.. ಹಾನಗಲ್ನಲ್ಲಿ ಹೊತ್ತಿ ಉರಿದ ಕಾಡು