ಬಾಗಲಕೋಟೆ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವರ್ತಕರ ಸಂಘಟನೆ ವತಿಯಿಂದ ಮೆಕ್ಕೆಜೋಳವನ್ನು ವಿಶೇಷ ಗೂಡ್ಸ್ ರೈಲಿನ ಮೂಲಕ ಬಾಂಗ್ಲಾದೇಶಕ್ಕೆ ರಫ್ತು ಮಾಡಲಾಯಿತು.
ಶಾಸಕ ವೀರಣ್ಣ ಚರಂತಿಮಠ ಮೆಕ್ಕೆಜೋಳ ತುಂಬಿದ ಗೂಡ್ಸ್ ರೈಲಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು 2,500 ಟನ್ ಮೆಕ್ಕೆಜೋಳ ಖರೀದಿಸಿ ಬಾಂಗ್ಲಾದೇಶಕ್ಕೆ ಕಳುಹಿಸಲಾಗುತ್ತದೆ. ಇದರಿಂದ ಈ ಭಾಗದ ರೈತರಿಗೆ ಲಾಭದಾಯಕವಾಗಲಿದೆ ಎಂದರು.
ಪ್ರತಿ ವರ್ಷ ಮೆಕ್ಕೆಜೋಳ ಖರೀದಿಸಿ ದೇಶದ ವಿವಿಧ ಪ್ರದೇಶದಲ್ಲಿ ಮಾರಾಟ ಮಾಡಿ ಲಾಭ ಪಡೆಯಲಾಗಿತ್ತು. ಆದರೆ ಈ ಬಾರಿ ಬಾಂಗ್ಲಾದೇಶಕ್ಕೆ ರಫ್ತು ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಬರುವಂತಾಗಿದೆ. ಲಾರಿ ಮೂಲಕ ಮೆಕ್ಕೆಜೋಳ ತೆಗೆದುಕೊಂಡು ಬಂದು ಮರಳಿ ರೈಲಿನಲ್ಲಿ ಕಳುಹಿಸಲಾಗಿದೆ.