ಬಾಗಲಕೋಟೆ: ಇಳಕಲ್ ನಗರದ ವಾರ್ಡ್ ನಂಬರ್ 07 ರಲ್ಲಿ ನಡೆದ ಆರೋಗ್ಯ ಹಸ್ತ ಕಾರ್ಯಕ್ರಮ ಹಾಗೂ ಜಾಗೃತಿ ಅಭಿಯಾನ ವಾಹನಕ್ಕೆ ಹುನಗುಂದ ಕ್ಷೇತ್ರದ ಮಾಜಿ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾಕ್ಕೆ ಭಯಪಡುವ ಅಗತ್ಯವಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುವ ಬದಲು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ ವೃದ್ಧರು ಹಾಗೂ ಇತರೆ ಕಾಯಿಲೆ ಹೊಂದಿದವರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಮಾಜಿ ಶಾಸಕರು ತಾವೇ ಥರ್ಮೋಮೀಟರ್ ಹಾಗೂ ಪಲ್ಸ್ ಆಕ್ಸಿಮೀಟರ್ ಬಳಸಿ ಉಷ್ಣಾಂಶ ಪ್ರಮಾಣ, ಆಮ್ಲಜನಕದ ಪ್ರಮಾಣವನ್ನು ಪರೀಕ್ಷೆ ಮಾಡಿ, ಕೊರೊನಾ ಭಯ ಹೋಗಲಾಡಿಸಲು ಜಾಗೃತಿ ಮೂಡಿಸಿದರು. ಈ ಸಮಯದಲ್ಲಿ ಸ್ಥಳೀಯ ಮುಖಂಡರು ಹಾಗೂ ಕೊರೊನಾ ವಾರಿಯರ್ಸ್ ಉಪಸ್ಥಿತರಿದ್ದರು.