ಬಾಗಲಕೋಟೆ: ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಈಗಾಗಲೇ ವಶಪಡಿಸಿಕೊಳ್ಳಲಾದ ಮರಳಿನ ಗುಣಮಟ್ಟವನ್ನು ಪರೀಕ್ಷಿಸಿ ದರ ನಿಗದಿ ಪಡಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.
ಜಿಲ್ಲೆಗೆ ಪಿಂಕ್ ಗ್ರಾನೈಟ್ ಗುತ್ತಿಗೆ ಕೋರಿ ಲೈಸೆನ್ಸ್ಗಾಗಿ 4 ಅರ್ಜಿಗಳು ಸ್ವೀಕೃತವಾಗಿ ಸದರಿ ಅರ್ಜಿಗಳಿಗೆ ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಅಭಿಪ್ರಾಯ ಪಡೆಯಲಾಗಿದೆ. ಅಭಿಪ್ರಾಯದಲ್ಲಿ ಸಕಾರಾತ್ಮಕವಾಗಿದೆ ಎಂದು ಸಭೆಗೆ ತಿಳಿಸಿದಾಗ ಈ ಕುರಿತು ಚರ್ಚಿಸಿ ಜಂಟಿ ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಶಪಡಿಸಿಕೊಳ್ಳಲಾದ ಮರಳಿನ ಮಾಹಿತಿಯನ್ನು ಸರಿಯಾಗಿ ನೀಡದೇ, ಸಭೆಗೆ ಬರುವಾಗ ಸಂಪೂರ್ಣ ಮಾಹಿತಿ ಇಲ್ಲದೇ ಕೇಳಿದ ಪ್ರಶ್ನೆಗೆ ಉಡಾಫೆ ಉತ್ತರ ನೀಡುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಖಂಡಿಸಿ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಸಭೆಯಲ್ಲಿ ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ಕಾಣದಿದ್ದಲ್ಲಿ ಸೂಕ್ತ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಅವರು ಎಚ್ಚರಿಕೆ ನೀಡಿದರು.