ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರತಿ ಮೆಟ್ರಿಕ್ ಟನ್ ಮರಳಿಗೆ 645 ರೂ. ದರ ನಿಗದಿಪಡಿಸಲಾಗಿದ್ದು, ಇದಕ್ಕಿಂತ ಹೆಚ್ಚಿನ ದರಕ್ಕೆ ಗುತ್ತಿಗೆದಾರರು ಮರಳು ಮಾರಾಟ ಮಾಡಿದಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಲಾಗುವುದೆಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ, ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರ ಮತ್ತು ಜಿಲ್ಲಾ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ 1 ಮೆಟ್ರಿಕ್ ಟನ್ಗೆ 480 ರೂ. ನಿಗದಿ ಮಾಡಲಾಗಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳ ದರ ಹೆಚ್ಚಾಗಿರುವುದರಿಂದ ಗುತ್ತಿಗೆದಾರ ಮನವಿ ಮೇರೆಗೆ ದರವನ್ನು ಹೆಚ್ಚಿಸಲಾಗಿದೆ ಎಂದರು.
ಗದಗ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಒಂದು ಮೆಟ್ರಿಕ್ ಟನ್ಗೆ 900ರಿಂದ 950 ರೂ.ಗಳಿಗೆ ಮರಳು ದರ ನಿಗದಿ ಮಾಡಿದ್ದು, ಜಿಲ್ಲೆಯ ಜನರಿಗೆ ಭಾರವಾಗದಂತೆ ಹಾಲಿ ದರ 480 ರೂ.ಗಳಿಗೆ 165 ರೂ. ಮಾತ್ರ ಹೆಚ್ಚಿಸಲಾಗಿದೆ. ಸರ್ಕಾರ ನಿಗದಿಪಡಿಸಿದ 970 ರೂ.ಗಳಿಗಿಂತ ಕಡಿಮೆ ದರ ನಿಗದಿ ಮಾಡಲಾಗಿದೆ ಎಂದರು.
ಮರಳು ಗಣಿಗಾರಿಕೆಗೆ ಮಾಡಲು ಬಾದಾಮಿ ತಾಲೂಕಿನಿಂದ 11 ಹಾಗೂ ಹುನುಗುಂದ ತಾಲೂಕಿನಿಂದ 1 ಅರ್ಜಿ ಸಲ್ಲಿಕೆಯಾಗಿವೆ. ಈ ಬಗ್ಗೆ ಸ್ಥಳ ಪರಿಶೀಲನೆ ಮತ್ತು ಗುಣಮಟ್ಟ ಪರೀಕ್ಷಿಸಿ ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು. ಸದ್ಯ 16 ಜಮೀನುಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದರು.