ಬಾಗಲಕೋಟೆ : ಎಸ್ಎಸ್ಎಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ಅಂದ್ರೆ ವಿದ್ಯಾರ್ಥಿಗಳಿಗೆ ಏನೋ ಒಂಥರಾ ಭಯ, ಚಿಂತೆ. ಇಂತಹಾ ಪರೀಕ್ಷಾ ಭಯವನ್ನು ಹೋಗಲಾಡಿಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಬೆಳಗಾವಿಯ ಜೋಡಿಯೊಂದು ಹೊಸ ಪ್ರಯೋಗ ಮಾಡಿದ್ದು, ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಪರೀಕ್ಷಾ ಪ್ರವೇಶ ಪತ್ರಿಕೆ ಮಾದರಿಯಲ್ಲಿ ಮುದ್ರಿಸಿದ್ದಾರೆ.
ಜಮಖಂಡಿ ತಾಲೂಕು ಶಿರಗುಪ್ಪಿ ಗ್ರಾಮದ ಬಸವರಾಜ ಮತ್ತು ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಹಾಲಹಳ್ಳಿ ಗ್ರಾಮದ ಪಾವರ್ತಿ (ಚಂದ್ರಿಕಾ) ಫೆ.17 ರಂದು ಅಥಣಿ ತಾಲೂಕು ಹಾಲಹಳ್ಳಿ ಗ್ರಾಮದ ಬ್ಯಾಡರಟ್ಟಿಯ ತೋಟದ ಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆ ತಮ್ಮ ಲಗ್ನ ಪತ್ರಿಕೆಯನ್ನು ಪರೀಕ್ಷಾ ಪ್ರವೇಶ ಪತ್ರಿಕೆಯ ಮಾದರಿಯಲ್ಲಿ ಮುದ್ರಿಸಿ, ಪರೀಕ್ಷೆ ಎದುರಿಸಲು ಸಜ್ಜಾಗುತ್ತಿರುವ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಪ್ರಯತ್ನ ಮಾಡಿದ್ದಾರೆ.
ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಬಸವರಾಜ ಮತ್ತು ಪಾರ್ವತಿ ಜೋಡಿ ಮಾಡಿರುವ ವಿಭಿನ್ನ ಪ್ರಯತ್ನಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.