ಬಾಗಲಕೋಟೆ: ಮಹಾಮಾರಿ ಕೊರೊನಾ ಮೂರನೇ ಅಲೆ ಬರುತ್ತದೆ ಎಂದು ಈಗಾಗಲೇ ಎಲ್ಲೆಡೆ ಭಯ ಆವರಿಸಿದೆ. ಇಲ್ಲಿನ ರೈತ ಕುಟುಂಬವೊಂದು ಮಾರಣಾಂತಿಕ ಖಾಯಿಲೆ ಬಾರದಿರಲೆಂದು ದೇವರಿಗೆ 20 ಕಿ.ಮೀವರೆಗೆ ದೀರ್ಘದಂಡ ನಮಸ್ಕಾರ ಹಾಕುತ್ತಾ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಶಿದರಾಯಿ ಸಂಗಾಪುರ್ ಎಂಬ ರೈತ ತಮ್ಮ ಕುಟುಂಬದವರ ಜೊತೆ ಸೇರಿ ತೊದಲಬಾಗಿಯಿಂದ ವಿಜಯಪುರ ಜಿಲ್ಲೆಯ ಬಬಲಾದಿ ಸದಾಶಿವ ಮುತ್ಯ ಮಠದವರೆಗೆ (20 ಕಿ.ಮೀ) ದೀರ್ಘದಂಡ ನಮಸ್ಕಾರ ಹಾಕುತ್ತಾ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಮೂಲಕ ಕೊರೊನಾ ದೂರ ಮಾಡು ದೇವರೇ ಎಂದು ಬೇಡಿಕೊಂಡಿದ್ದಾರೆ.
ಈ ಭಾಗದಲ್ಲಿ ಬಬಲಾದಿ ದೇವರ ಮೇಲೆ ಜನರಿಗೆ ಅಪಾರವಾದ ನಂಬಿಕೆಯಿದೆ. ಏಕೆಂದರೆ, ಅಲ್ಲಿನ ಶ್ರೀಗಳು ನೀಡುವ ಹೇಳಿಕೆ ನೂರಕ್ಕೆ ನೂರರಷ್ಟು ನಿಜವಾಗುತ್ತದಂತೆ. ಈ ಹಿಂದೆ ಕೊರೊನಾ ಬರುವ ಬಗ್ಗೆ, ಮಳೆ-ಬೆಳೆ ಆಗುವ ಹಾಗೂ ರಾಜಕೀಯ ಬದಲಾವಣೆಗಳ ಬಗ್ಗೆ ಶ್ರೀಗಳು ನುಡಿದ ಹೇಳಿಕೆ ಸತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕೊರೊನಾ ಬರಬಾರದು ಎಂದು ದೇವರಿಗೆ ಹರಕೆ ಹೊತ್ತಿದ್ದಾರೆ.
ತಮ್ಮ ಗ್ರಾಮದಲ್ಲಿ ದಾರಿ ಉದ್ದಕ್ಕೂ ದಂಪತಿ ಸಮೇತ ಈ ರೈತ ಕುಟುಂಬದವರು ದೀರ್ಘದಂಡ ನಮಸ್ಕಾರ ಹಾಕುತ್ತಾ ಸಾಗಿದ್ದಾರೆ. ಪ್ರತಿ ದಿನ ಐದು ಕಿ.ಲೋ ಮೀಟರ್ನಷ್ಟು ಸಂಚಾರ ಮಾಡುತ್ತಾ ಬಬಲಾದಿ ಅಜ್ಜರ ಜಪ ಮಾಡುತ್ತಾ ಸಾಗುತ್ತಿದ್ದಾರೆ. ನಾಲ್ಕು ದಿನಗಳ ನಂತರ ಸುಕ್ಷೇತ್ರಕ್ಕೆ ತಲುಪಿ ಅಲ್ಲಿ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿ, ದೇಶಕ್ಕೆ ಒಳಿತು ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸಲಿದ್ದಾರೆ.