ಬಾಗಲಕೋಟೆ: ಡಿಸಿಸಿ ಬ್ಯಾಂಕ್ ಚುನಾವಣೆಯು ಪ್ರತಿಷ್ಠೆ ಕಣವಾಗಿರುವ ಪರಿಣಾಮ ಆರೋಪ, ಪ್ರತ್ಯಾರೋಪಗಳ ಸುರಿಮಳೆ ನಡೆಯುತ್ತಿದೆ. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪ ಮಾಡಿರುವ ಬೆನ್ನಲ್ಲೇ ಪ್ರತಿಸ್ಪರ್ಧಿ ಅಭ್ಯರ್ಥಿಯಾಗಿರುವ ಬಿಜೆಪಿ ಪಕ್ಷದ ಯುವ ಮುಖಂಡ ವೀರೇಶ ಉಂಡೋಡಿ, ವಿಜಯಾನಂದ ಕಾಶಪ್ಪನವರ ವಿರುದ್ಧ ಕೊಲೆ ಆರೋಪ ಹೊರಿಸಿದ್ದಾರೆ.
ಅಕ್ಟೋಬರ್ 27 ರಂದು ಇಳಕಲ್ ಡಿಸಿಸಿ ಬ್ಯಾಂಕ್‌ನ ಪಿಗ್ಮಿ ಏಜೆಂಟ್ ಕೊಲೆಯಾಗಿದ್ದು, ಕೊಲೆ ಜಾಗದಲ್ಲಿ ಐದು ಜನ ಡಿಸಿಸಿ ಬ್ಯಾಂಕ್‌ನ ನೌಕರರು ಇದ್ದರು. ಅದರಲ್ಲಿ ಕೆಂದೂರು, ಬಿ.ಎಸ್. ಪಾಟೀಲ, ಲಮಾಣಿ ಹಾಗೂ ವಿ.ಎ. ಪಾಟೀಲ, ಸಜ್ಜನ ಇವರೇ ಕೊಲೆಗೆ ಕಾರಣಕರ್ತರು ಎಂದು ಪಿಕೆಪಿಎಸ್ ಬ್ಯಾಂಕ್ ನಿರ್ದೇಶಕ ಹುದ್ದೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ವೀರೇಶ ಉಂಡೋಡಿ ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಶಾಸಕರಿಗೆ ಸಂಬಂಧಪಟ್ಟ ಸಹೋದರರ ಮನೆಯಲ್ಲಿ ಕೊಲೆ ನಡೆದಿದ್ದು, ಕೊಲೆಯಾದಂತಹ ವ್ಯಕ್ತಿಯನ್ನು ರೋಡ್ ತಂದು ಬಿಸಾಕಿದ್ದಾರೆ. ಕೊಲೆಯಲ್ಲಿ ನೇರವಾಗಿ ಡಿಸಿಸಿ ಬ್ಯಾಂಕ್‌ನ ನೌಕರರು ಇದ್ದಾರೆ ಕೊಲೆ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಹಾಗೂ ಕೊಲೆಯಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಚುನಾವಣೆಯಲ್ಲಿ ಕಾಶಪ್ಪನವರ ಸೋಲಿಣಿಸುವುದು ಶತಸಿದ್ದ ಅವರು ಅಕ್ರಮ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ಬಗ್ಗೆ ಏನು ಮಾಡಬೇಕು ಎಂಬುದು ನಮಗೂ ಕಾನೂನಿನ ಅರಿವಿದೆ. ಯಾವುದಕ್ಕೂ ಅಸ್ಪದ ಮಾಡಿಕೊಡೊದಿಲ್ಲ ಯಾವುದೇ ಪರಿಸ್ಥಿತಿಯಲ್ಲಿ ಕಾಶಪ್ಪನವರ ಗೆಲ್ಲೋಕೆ ಸಾಧ್ಯವಿಲ್ಲ ಎಂದರು.
ತಮಗೆ ಜೀವಭಯ ಇದೆ ಎಂಬ ಕಾಶಪ್ಪನವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾವು ಯಾವ ರೀತಿ ಅಕ್ರಮ ಮಾಡಿದ್ದೀವಿ ಅನ್ನೋದನ್ನ ತೋರಿಸಲಿ. ನ್ಯಾಯಾಲಯಕ್ಕೂ ಸುಳ್ಳು ದಾಖಲೆ ಕೊಡೋದ್ರಲ್ಲಿ ಕಾಶಪ್ಪನವರ ನಿಸ್ಸೀಮರು. ಈ ಬಗ್ಗೆ ಮೇಲ್ಮನವಿ ಹೋಗಿದ್ದೇವೆ. 2ನೇ ತಾರೀಖು ನಿರ್ಣಯ ಆಗುತ್ತೆ, ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು.
ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡ್ತಿದಾರೆ ಎಂಬ ಕಾಶಪ್ಪನವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಗೂಂಡಾಗಿರಿ ಸಂಸ್ಕೃತಿ ಯಾರು ಮಾಡ್ತಿದಾರೆ ಅಂತಾ ಜಿಲ್ಲೆಯ ಜನರಿಗೆ, ಪೊಲೀಸರಿಗೆ ಗೊತ್ತಿದೆ. ಪೊಲೀಸ್ ರೆಕಾರ್ಡ್ಸ್ ತೆಗೆದರೆ ಯಾರ ವಿರುದ್ಧ ಎಷ್ಟು ಕೇಸ್ ಆಗಿವೆ, ಯಾರು ಕೊಲೆ ಪ್ರಯತ್ನ ಮಾಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.