ಬಾಗಲಕೋಟೆ: ಕಳೆದ ರಾತ್ರಿ ಸುರಿದ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಹಲವು ನೇಕಾರರ ಮನೆಗಳಿಗೆ ಹಾನಿ ಉಂಟಾಗಿರುವ ಘಟನೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣ ಸೇರಿದಂತೆ ವಿವಿಧೆಡೆ ನಡೆದಿದೆ. ಧಾರಾಕಾರವಾಗಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಸಾಕಷ್ಟು ಹಾನಿ ಉಂಟಾಗಿದೆ. ನೇಕಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕೆಂಗೇರಿ ಮಡ್ಡಿ ಸೇರಿದಂತೆ ಇತರ ಪ್ರದೇಶದಲ್ಲಿ ಬೃಹದಾಕಾರದ ಮರಗಳು ನೇಕಾರರ ಮನೆಗಳ ಮೇಲೆ ಉರುಳಿ ಬಿದಿದ್ದರಿಂದ, ಮನೆ ಮತ್ತು ಆಸ್ತಿ- ಪಾಸ್ತಿಗೆ ಹಾನಿಯಾಗಿದೆ.
ಮೊದಲೇ ನೇಕಾರರು ಆರ್ಥಿಕವಾಗಿ ಸಂಕಷ್ಟದಲಿರುವು ಇಂತಹ ಸಮಯದಲ್ಲಿ, ವರುಣನ ಆರ್ಭಟದಿಂದ ನೇಕಾರರು ಇನ್ನಷ್ಟು ತೊಂದರೆ ಸಿಲುಕಿದ್ದಾರೆ. ಕೆಂಗೇರಿ ಮಡ್ಡಿ ಪ್ರದೇಶದಲ್ಲಿ ಪ್ರತಿ ನಿತ್ಯ ದುಡಿದರೆ ಒಪ್ಪತ್ತಿನ ಊಟಕ್ಕೆ ಆದಾಯ ಸಿಗುತ್ತದೆ. ಇಂತಹ ನೇಕಾರರ ತಗಡಿನ ಶೆಡ್ನ ಮೇಲೆ ಮರ ಬಿದ್ದು ಹಾನಿ ಆಗಿದೆ. ಇದರಿಂದ ವಿದ್ಯುತ್ ಚಾಲಿತ ಮಗ್ಗಗಳು ಹಾಗೂ ತಯಾರಾಗಿರುವ ಕಾಟನ್ ಸೀರೆಗಳು ನೀರು ಪಾಲಾಗಿವೆ.
ಇದರಿಂದ ನೇಕಾರರು ಆರ್ಥಿಕವಾಗಿ ನಷ್ಟಕೊಂಡಿದ್ದಾರೆ. ಮಗ್ಗದ ಯಂತ್ರೋಪಕರಣಗಳು, ವಸ್ತುಗಳು ಹಾಗೂ ತಯಾರಿಸಿರುವ ಸೀರೆಗಳಿಗೂ ಸಹ ಮಳೆ ಗಾಳಿಯಿಂದಾಗಿ ಸಂಪೂರ್ಣ ಹಾನಿ ಆಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ನೇಕಾರರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಈ ಬಗ್ಗೆ ನೇಕಾರರ ಮುಖಂಡರಾದ ಶಿವಲಿಂಗ ಟಿರಕಿ ಮಾತನಾಡಿ, ಜವಳಿ ಇಲಾಖೆಯಿಂದಾಗಿ ಅಥವಾ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ, ಪ್ರಕೃತಿ ವಿಕೋಪ ಅಡಿ ಹಾನಿ ಆಗಿರುವ ನೇಕಾರರಿಗೆ ಪರಿಹಾರ ಧನ ನೀಡಬೇಕು. ಮೊದಲೇ ಸಂಕಷ್ಟದಿಂದ ಜೀವನ ಸಾಗಿಸುತ್ತಿದ್ದ ನೇಕಾರರಿಗೆ ಕಳೆದ ರಾತ್ರಿ ಬಿರುಗಾಳಿ ಸಮೇತ ಸುರಿದ ಭಾರಿ ಮಳೆಯಿಂದಾಗಿ ಗಾಯ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಈ ಕೂಡಲೇ ಸರ್ಕಾರ ಗಮನ ಹರಿಸಿ, ತೊಂದರೆಗೆ ಒಳಗಾದ ನೇಕಾರರಿಗೆ ಸೂಕ್ತ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಗಾಳಿ-ಮಳೆಗೆ ಬಾಳೆ ಬೆಳೆ ನಾಶ: ಮತ್ತೊಂದೆಡೆ ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ ಸಮೀಪದ ಅಂಕರವಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಬಾಳೆ ಬೆಳೆ ನೆಲಕಚ್ಚಿರುವ ಘಟನೆ ನಡೆದಿದೆ. ಅಬ್ದುಲ್ ಖಾದರ್ ಎಂಬುವವರಿಗೆ ಸೇರಿದ ಗ್ರಾಮದ ಸರ್ವೆ ನಂ. 81 ರಲ್ಲಿನ ಸುಮಾರು 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದೆ. ಸುಮಾರು 5 ರಿಂದ 6 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ತೋಟದಲ್ಲಿ ಅಳವಡಿಸಿದ್ದ ಪೈಪ್ ಲೈನ್, ಸ್ಪ್ರಿಂಕ್ಲರ್ ಗಳು ಹಾಗೂ ಅಡಕೆ ಗಿಡಗಳಿಗೂ ಹಾನಿಯಾಗಿದ್ದು, ಸುಮಾರು 20ಕ್ಕೂ ಅಧಿಕ ಅಡಿಕೆ ಗಿಡಗಳು ಧರೆಗುರುಳಿವೆ.
ಸ್ಥಳಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿ ಕೆ.ಆರ್. ದೊರೆರಾಜ್ ಹಾಗೂ ಕಂದಾಯ ಇಲಾಖೆಯ ಎಂ.ಎಸ್. ಯಶವಂತ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಧ್ಯಮದವರೊಂದಿಗೆ ಎ.ಕೆ. ಖಾಲೀದ್, ಸಾಲ ಮಾಡಿ ಬಾಳೆಯನ್ನು ಬೆಳೆಯಲಾಗಿತ್ತು. ಇನ್ನೊಂದು ತಿಂಗಳಿನಲ್ಲಿ ಫಸಲು ಕೈ ಸೇರುವ ನಿರೀಕ್ಷೆ ಇತ್ತು. ಆದರೆ, ಮಳೆ-ಗಾಳಿಯಿಂದ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ಸುಮಾರು 6 ಲಕ್ಷ ರೂ. ನಷ್ಟವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಮಳೆ ಅವಾಂತರ: ಮರ, ವಿದ್ಯುತ್ ಕಂಬ ಧರೆಗೆ; ಮನೆ, ಅಂಗನವಾಡಿಗೆ ಹಾನಿ