ಬಾಗಲಕೋಟೆ : ಮದುವೆ ಕಾರ್ಯಕ್ರಮ ಸೇರಿ ಇತರ ಶುಭ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ನಡೆಸುವಂತಿಲ್ಲ ಎಂದು ಎಂದು ಜಿಲ್ಲಾಧಿಕಾರಿ ಡಾ. ಕೆ ರಾಜೇಂದ್ರ ಆದೇಶಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹತೋಟಿಯಲ್ಲಿದ್ದ ಕೊರೊನಾ ಮದುವೆ, ಸೀಮಂತ ಕಾರ್ಯಕ್ರಮ ಹಾಗೂ ಮೃತ ಪಟ್ಟವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದವರಿಂದ ಹೆಚ್ಚಾಗಿದೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಡಿಸಿಎಂ ಗೋವಿಂದ ಕಾರಜೋಳ ಅವರ ಮಾಹಿತಿ ಮೇರೆಗೆ ಕಾರ್ಯಕ್ರಮಗಳನ್ನು ನಿಷೇಧ ಮಾಡಲಾಗಿದೆ ಎಂದರು.
ಮದುವೆ ಮಾಡುವವರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡು, ಕೇವಲ ಐದು ಜನ ಸಾಕ್ಷಿದಾರರ ಸಮ್ಮುಖದಲ್ಲಿ ಮದುವೆಯಾಗಬಹುದು ಎಂದು ತಿಳಿಸಿದರು.
ಮುಂದೆ ಮರಣ ಹೊಂದಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ, ಅಂತ್ಯ ಸಂಸ್ಕಾರ ನಡೆಸಬೇಕು ಎಂದು ತಿಳಿಸಿದ್ದಾರೆ. ಈ ಕುರಿತು ಯಾರಾದ್ರೂ ಸರಿಯಾದ ಮಾಹಿತಿ ನೀಡದೆ ಕಾರ್ಯಕ್ರಮ ಅಥವಾ ಅಂತ್ಯ ಸಂಸ್ಕಾರ ಮಾಡಿದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕೊರೊನಾ ಸಂಬಂಧ ಜಿಲ್ಲೆಯ 9 ತಾಲೂಕಿನಲ್ಲಿ ಪ್ಲೈಯಿಂಗ್ ಸ್ಕ್ವಾಡ್ ನೇಮಿಸಿ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಉಪಯೋಗದ ಬಗ್ಗೆ ನಿಗಾವಹಿಸಲಾಗುವುದು. ಜೊತೆಗೆ ಸರ್ಕಾರದ ನಿಯಮ ಪಾಲಿಸದವರಿಗೆ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದರು.