ಬಾಗಲಕೋಟೆ : ಬಸವಣ್ಣನವರ ಐಕ್ಯಸ್ಥಳ ಹಾಗೂ ಧಾರ್ಮಿಕ ಕ್ಷೇತ್ರ ಕೂಡಲಸಂಗಮದಲ್ಲಿ ಶ್ರೀಗಂಧ ಮರಗಳ ಕಳ್ಳತನ ಮುಂದುವರೆದಿದ್ದರೂ ಪ್ರಾಧಿಕಾರ ಮಂಡಳಿ ಮಾತ್ರ ಕಣ್ಣುಮುಚ್ಚಿ ಕುಳಿತಿದೆ.
ಬಸವ ಅಂತಾರಾಷ್ಟ್ರೀಯ ಕೇಂದ್ರದ ಹತ್ತಿರ ಇರುವ ಪೂಜಾ ವನದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಯಂತ್ರದ ಸಹಾಯದಿಂದ ಕತ್ತರಿಸಿ ಕಳ್ಳತನ ಮಾಡಲಾಗಿದೆ. ಏಳು ಜನ ಯುವಕರ ಗುಂಪು ಈ ಮರಗಳನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಸಂಗಮದಲ್ಲಿ ಸುಮಾರು 528 ಏಕರೆ ಅರಣ್ಯ ಪ್ರದೇಶವಿದೆ. ಸಾಕಷ್ಟು ಶ್ರೀಗಂಧ ಮರಗಳನ್ನು ಇಲ್ಲಿ ಬೆಳೆಸಲಾಗಿದೆ. ಈ ನಡುವೆ ಕಳ್ಳತನ ನಡೆಯುತ್ತಿದ್ದರೂ ಕೂಡ ಕಳೆದ ಎರಡು ವರ್ಷಗಳಿಂದ ಇದು ಬೆಳಕಿಗೆ ಬಂದಿಲ್ಲ.
ಹಿಂದೆ ಪ್ರಾಧಿಕಾರದ ಆಯುಕ್ತರು ರಾತ್ರಿ ಸಂಚಾರ ಮಾಡಿ,ಬಿಗಿ ಭದ್ರತೆ ಒದಗಿಸುತ್ತಿದ್ದರು. ಆದ್ರೀಗ ಆಯುಕ್ತರು ಪ್ರಭಾರಿ ಇರುವ ಹಿನ್ನೆಲೆ ರಾತ್ರಿ ಭದ್ರತೆ ನೀಡಲಾಗಿಲ್ಲ. ಭದ್ರತೆಗೆ ನೇಮಕ ಮಾಡಿದ ಸಿಬ್ಬಂದಿ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿಯೇ ಯುವಕರ ಗುಂಪು ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಆದರೆ, ರಾತ್ರಿ ಫೋನ್ ಸಂಪರ್ಕ ಸಿಗದ ಹಿನ್ನೆಲೆ ಕಳ್ಳತನವಾಗಿದ್ದು, ಈ ಬಗ್ಗೆ ಪ್ರಾಧಿಕಾರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.