ಬಾಗಲಕೋಟೆ: ತೆಂಗಿನ ಮರವನ್ನು ಹತ್ತುವುದೇ ಕಷ್ಟ. ಅಂತಹದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ತಲೆ ಕೆಳಗಾಗಿ ಕಲ್ಪವೃಕ್ಷವನ್ನು ಏರುವುದು ಅಚ್ಚರಿಗೆ ಮೂಡಿಸುತ್ತೆ. ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರು ಗ್ರಾಮದಲ್ಲಿ ತಲೆಕೆಳಗೆ ಮಾಡಿ ತೆಂಗಿನ ಮರವನ್ನು ಹತ್ತುವ ಈ ವಿಶೇಷ ವ್ಯಕ್ತಿ ಇದ್ದಾನೆ ತನ್ನ ಈ ಕೌಶಲ್ಯದ ಮೂಲಕ ಜನರ ಗಮನ ಸೆಳೆಯುವುದರ ಜೊತೆ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ.
ಹೌದು, ಈ ಕಲೆಯನ್ನ ಕರಗತ ಮಾಡಿಕೊಂಡಿರುವ ವ್ಯಕ್ತಿಯ ಹೆಸರು ಬಾಬು ತೇರದಾಳ. ಇವರು ಕೇವಲ ಮರಗಳನ್ನ ಮಾತ್ರವಲ್ಲದೇ ವಿದ್ಯುತ್ ದೀಪದ ಕಂಬಗಳನ್ನ ಸಹ ತಲೆಕೆಳಗಾಗಿ ಹತ್ತುತ್ತಾರೆ. ಕಳೆದ ಐದು ವರ್ಷಗಳಿಂದ ಹೀಗೆ ತಲೆಕೆಳಗಾಗಿ ಮರಗಳು ಮತ್ತು ವಿದ್ಯುತ್ ದೀಪದ ಕಂಬಗಳನ್ನ ಏರುವುದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ.
ಇವರು ಯಾವುದೇ ಸಲಕರಣೆಯ ಸಹಾಯವಿಲ್ಲದೇ ಸ್ಪೈಡರ್ ಮ್ಯಾನ್ ರೀತಿ ತೆಂಗಿನ ಮರವನ್ನು ಹತ್ತಿ ಕಾಯಿ ಕೀಳುತ್ತಾರೆ. ತೆಂಗಿನ ಮರಗಳು ಎಷ್ಟೇ ಎತ್ತರವಿದ್ದರೂ, ಇವರು ಅವುಗಳನ್ನ ತಲೆಕೆಳಗೆ ಅನಾಯಾಸವಾಗಿ ಏರುವುದನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಾರೆ.
ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ 'ಹಾವೇರಿ ಡಾನ್': ಶರವೇಗದ ಹೋರಿ ಸಾವಿಗೆ ಸಾವಿರಾರು ಅಭಿಮಾನಿಗಳ ಕಂಬನಿ
ಯಾರೇ ಆಗಲಿ ಯಾವ ಸಂದರ್ಭದಲ್ಲಿ ಕರೆದರೂ ಅವರ ತೋಟಕ್ಕೆ ಹೋಗಿ ತೆಂಗಿನ ಮರದಿಂದ ಕಾಯಿ ಕಿತ್ತುಕೊಟ್ಟು, ಅವರು ಕೊಡುವ ಅಲ್ಪ ಸ್ವಲ್ಪ ಹಣದಲ್ಲೇ ಬಾಬು ಜೀವನ ಸಾಗಿಸುತ್ತಿದ್ದಾರೆ. ಕಳೆದ ಐದು ವರ್ಷದ ಹಿಂದೆ ಹವ್ಯಾಸಕ್ಕಾಗಿ ಕಲಿತ ಈ ವಿದ್ಯೆ ಈಗ ಜೀವನೋಪಾಯದ ಮಾರ್ಗವಾಗಿದೆ.
ಈ ಭಾಗದಲ್ಲಿ ಎಲ್ಲೆ ಜಾತ್ರೆ, ಹಬ್ಬ-ಹರಿದಿನಗಳು ನಡೆದ್ರೂ, ಅಲ್ಲಿ ಇವರು ತಮ್ಮ ವಿಶೇಷ ಕಲೆಯನ್ನ ಪ್ರದರ್ಶಿಸಿ, ಅದರಿಂದ ಬರುವ ಹಣವನ್ನೇ ಜೀವನೋಪಾಯಕ್ಕೆ ಬಳಸುತ್ತಿದ್ದಾರೆ. ಪತ್ನಿ, ಮೂವರು ಮಕ್ಕಳನ್ನ ಹೊಂದಿರುವ ಇವರಿಗೆ ಇರಲು ಒಂದು ಸ್ವಂತ ಮನೆಯಿಲ್ಲ, ಕಡು ಬಡತನದಲ್ಲೇ ಜೀವನ ಸಾಗಿಸುತ್ತಿದ್ದಾರೆ.