ಬಾಗಲಕೋಟೆ : ದಸರಾ ಹಬ್ಬದ ನಿಮಿತ್ತ ನಗರದಲ್ಲಿರುವ ಜಗದಂಬಾ ದೇವಸ್ಥಾನದಲ್ಲಿ ಛಪ್ಪನ್ ಭೋಗ್ ಎಂಬ ವಿಶೇಷ ಪೂಜೆ ನೆರವೇರಿಸಲಾಯಿತು. 56 ಬಗೆಯ ತಿಂಡಿ ತಿನಿಸು ಹಾಗೂ ಹಣ್ಣು ಹಂಪಲುಗಳನ್ನು ದೇವಿಯ ಮುಂದೆ ಇಟ್ಟು ಪೂಜೆ ಸಲ್ಲಿಸಲಾಯಿತು. ಆ ಬಳಿಕ ಎಲ್ಲ ತಿಂಡಿಗಳನ್ನು ಒಂದೆಡೆ ಸೇರಿಸಿ ಪ್ರಸಾದ ವಿತರಣೆ ಮಾಡಲಾಯಿತು. ಯಾವುದೇ ಜಾತಿ, ಮತ, ಪಂಥ ಎನ್ನದೇ ಎಲ್ಲ ತರಹದ ಭಕ್ತರು ತಂದಿರುವ ಪ್ರಸಾದ ವಿತರಿಸುವ ಮೂಲಕ ಗಮನ ಸೆಳೆಯಲಾಯಿತು.
ದಸರಾ ಹಬ್ಬ ಬಂದರೆ ಸಾಕು ದೇವಾಲಯದಲ್ಲಿ ನಿತ್ಯ ಒಂದಿಲ್ಲೊಂದು ಪೂಜೆ, ಪುನಸ್ಕಾರ ಸೇರಿದಂತೆ ವಿಶಿಷ್ಟ ಆಚರಣೆ ಮಾಡುವ ಮೂಲಕ ಗಮನ ಸೆಳೆಯಲಾಗುತ್ತದೆ. ಈ ದೇವಾಲಯವು ಬಾಗಲಕೋಟೆ ನಗರದಲ್ಲಿ ಇದ್ದು, ದಸರಾ ಅಷ್ಟಮಿ ದಿನದಂದು ಛಪ್ಪನ್ ಭೋಗ್ ಎನ್ನುವ ವಿಶೇಷ ಆಚರಣೆ ಮಾಡಲಾಗುತ್ತದೆ. ಈ ಮೂಲಕ ದೇವಿ ಆರಾಧನೆ ಮಾಡಲಾಗುತ್ತದೆ. ಜೊತೆಗೆ, ಜಗದಂಬಾ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹೀಗೆ ಹಲವು ವರ್ಷಗಳಿಂದ ಈ ಆಚರಣೆ ಸಾಂಗೋಪ ಸಾಂಗವಾಗಿ ನಡೆದುಕೊಂಡು ಬಂದಿದೆ.
ಛಪ್ಪನ್ ಭೋಗ್ ವಿಶೇಷ : ಛಪ್ಪನ್ ಎಂದರೆ 56. ಭೋಗ್ ಅಂದರೆ ನೈವೇದ್ಯ. 56 ವಿವಿಧ ಬಗೆಯ ತಿಂಡಿ ತಿನಿಸು ಹಾಗೂ ಹಣ್ಣು ಹಂಪಲುಗಳನ್ನು ಇಟ್ಟು ಆರತಿ ಮಾಡಲಾಗುತ್ತದೆ. ಹೀಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ದೇವಿಯನ್ನು ಆರಾಧಿಸಿ. ಜೊತೆಗೆ ಭಕ್ತರಿಂದಲೇ ತಂದಿರುವ ಬಗೆ ಬಗೆಯ ತಿಂಡಿ ತಿನ್ನಿಸುಗಳನ್ನು ಒಂದೆಡೆ ಸೇರಿಸಿ ಇಡುತ್ತಾರೆ. ಬಳಿಕ ಅದನ್ನು ಪ್ರಸಾದವಾಗಿ ಎಲ್ಲರಿಗೂ ನೀಡಲಾಗುತ್ತದೆ. ಇಂತಹ ಪೂಜೆ ಮಾಡುವುದರಿಂದ ಎಲ್ಲರನ್ನು ದೇವಿ ಸುಖ, ಶಾಂತಿ ಹಾಗೂ ಸಮೃದ್ಧಿಯಿಂದ ಇಡುತ್ತಾಳೆ ಎಂಬುದು ಇಲ್ಲಿನ ಭಕ್ತರ ನಂಬಿಕೆ ಆಗಿದೆ.
ಇದನ್ನೂ ಓದಿ : ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜಾ ಕಾರ್ಯಕ್ರಮಗಳು ಆರಂಭ
ಛಪ್ಪನ್ ಭೋಗ್ ಎಂದು ಅಷ್ಟಮಿ ದಿನ ಆಚರಣೆ ಮಾಡುತ್ತಿರುವ ಹಿನ್ನೆಲೆ ಇದನ್ನು ನೋಡಲು ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಎಸ್ಎಸ್ಕೆ ಸಮಾಜದಿಂದ ನಡೆಯುವ ಛಪ್ಪನ್ ಭೋಗ್ ಜಿಲ್ಲೆಯಲ್ಲಿ ಭಾರಿ ವಿಶೇಷತೆ ಪಡೆದುಕೊಂಡಿದೆ.
ಇದನ್ನೂ ಓದಿ : ಚಾಮರಾಜನಗರ : ಚರ್ಚ್ನಲ್ಲೂ ಆಯುಧ ಪೂಜೆ ಸಂಭ್ರಮ!!
ಒಟ್ಟಿನಲ್ಲಿ ದಸರಾ ಹಿನ್ನೆಲೆ ಬಾಗಲಕೋಟೆ ನಗರದ ಜಗದಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪುನಸ್ಕಾರ ಸೇರಿದಂತೆ ಹತ್ತು ದಿನಗಳ ಕಾಲ ಪ್ರತಿನಿತ್ಯ ಒಂದೂಂದು ಅವತಾರ ಮಾಡಿ ಭಕ್ತರು ಗಮನ ಸೆಳೆಯುತ್ತಾರೆ. ಜೊತೆಗೆ, ದೇವಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ವಿಶೇಷವಾಗಿದೆ.
ಇದನ್ನೂ ಓದಿ : ಬಾಗಲಕೋಟೆಯಲ್ಲಿ ಅದ್ದೂರಿ ಛಪ್ಪನ್ ಭೋಜ್ ಆಚರಣೆ