ಬಾಗಲಕೋಟೆ: ಇಡೀ ದೇಶದಲ್ಲಿಯೇ ಹಿಂದೂ ದೇವಾಲಯಗಳ ನಿರ್ಮಾಣದ ಅತಿ ದೊಡ್ಡ ಆಂದೋಲನವನ್ನು ಆರಂಭಿಸಿದ್ದ ಚಾಲುಕ್ಯ ರಾಜರ ಸಮಾಧಿಗಳು ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಪತ್ತೆಯಾಗಿವೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಮುಂಬರುವ ಅಂತಾರಾಷ್ಟ್ರೀಯಮಟ್ಟದ “ಎಕ್ಸಪ್ಲೋರಿಂಗ್ ದಿ ಚಾಲುಕ್ಯನ್ ಲ್ಯಾಂಡ್, ಎ ಲಾರ್ಜೆಸ್ಟ್ ಟೆಂಪಲ್ ಮೂಮೆಂಟ್ ಆಫ್ ಇಂಡಿಯಾ” ಎಂಬ 2ನೇ ಪುಸ್ತಕದಲ್ಲಿ ದಾಖಲಿಸಲಿದ್ದು, ಬರುವ ಡಿಸೆಂಬರ್ ಕೊನೆಯ ವಾರದಲ್ಲಿ ದೆಹಲಿಯಲ್ಲಿ ಈ ಪುಸ್ತಕ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಐಹೊಳೆ, ಬಾದಾಮಿ, ಪಟ್ಟದಕಲ್ಲು, ಮಹಾಕೂಟ ದೇವಾಲಯಗಳನ್ನು ನಿರ್ಮಿಸಿ “ಹಿಂದೂ ವಾಸ್ತುಶಿಲ್ಪದ ಪ್ರಯೋಗ ಶಾಲೆ ಅಥವಾ ಹಿಂದೂ ವಾಸ್ತುಶಿಲ್ಪದ ತೊಟ್ಟಿಲು” ಎಂದೇ ಪ್ರಸಿದ್ಧಿಯಾಗಿರುವ ಚಾಲುಕ್ಯರ ಆಡಳಿತದಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಅನೇಕ ವಿದ್ವಾಂಸರು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಆದರೆ ಈ ವಾಸ್ತುಶಿಲ್ಪದ ಪರಂಪರೆಯನ್ನು ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತಗೊಳಿಸಿ ದಕ್ಷಿಣ ಭಾರತದ ಹಿಂದೂ ವಾಸ್ತುಶಿಲ್ಪದ ಪ್ರಯೋಗ ಶಾಲೆ ಎಂದು ಪರಿಗಣಿಸಿದ್ದರು.
ಕೇವಲ 20 ಕಿ.ಮೀ. ಅಂತರಗಳಲ್ಲಿ ಇಷ್ಟೊಂದು ಪ್ರಮಾಣದ ವಿವಿಧ ಪದ್ಧತಿಯ ದೇವಾಲಯಗಳು ಇಡೀ ದೇಶದಲ್ಲಿ ಕಂಡು ಬರುವುದು ಈ ಚಾಲುಕ್ಯರ ನಾಡಿನಲ್ಲಿ ಮಾತ್ರ. ಹೀಗಾಗಿ ಇಡೀ ಭಾರತದಲ್ಲಿಯೇ ಇದೊಂದು ಅತಿ ದೊಡ್ಡ ದೇವಾಲಯ ನಿರ್ಮಾಣಗಳ ಆಂದೋಲನವಾಗಿ ರೂಪಗೊಂಡಿತು. ವಿಶ್ವಮಟ್ಟದಲ್ಲಿಯೇ ಹಿಂದೂ ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪ ಎರಡರಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ, 6ನೇ ಶತಮಾನದಿಂದ 8ನೇ ಶತಮಾನದವರೆಗೆ ನಡೆದ ಈ ದೇವಾಲಯಗಳ ನಿರ್ಮಾಣದ ಆಂದೋಲನ ಹೊಸ ಶಿಲ್ಪಕಲಾ ಪರಂಪರೆಗೆ ದಾರಿದೀಪವಾಯಿತು. ದ್ರಾವಿಡ ಹಾಗೂ ನಾಗರ ಶೈಲಿಯ ಈ ದೇವಾಲಯಗಳು ಚಾಲುಕ್ಯರ ಶಿಲ್ಪಕಲೆ ಪರಂಪರೆಯ ಪರಾಕಾಷ್ಠೆಯನ್ನು ಎತ್ತಿ ತೋರಿಸುತ್ತವೆ.