ಬಾಗಲಕೋಟೆ: ಕಳೆದ ರವಿವಾರ ನಡೆದ ಸಾಗರೋತ್ತರ ಕನ್ನಡಿಗರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷರೂ ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ ವಿಶೇಷ ಅತಿಥಿಗಳಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾತನಾಡಿ, ಸಾಗರೋತ್ತರ ಕನ್ನಡಿಗರ ಮೂಲಕ ಸಂಘಟನಾತ್ಮಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದು ಸಾಧನೆಯ ಕೆಲಸ. ವಿದೇಶದಲ್ಲಿರುವ ಗಲ್ಪ್ ಕನ್ನಡಿಗರಿಗೆ ಅನುಚಿತ ಏಜೆಂಟ್ ಗಳು ಅವರ ಕೆಲವು ದಾಖಲೆಗಳನ್ನು ಇಟ್ಟುಕೊಂಡು ಅವರನ್ನು ಬ್ಲ್ಯಾಕ್ ಮೇಲ್ ಮಾಡುವ ಸಂಭವ ಜಾಸ್ತಿ. ಕೆಳಸ್ತರದಲ್ಲಿ ಕೆಲಸ ಮಾಡುವ ನೌಕರರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅವರನ್ನು ಕಷ್ಟಗಳಿಂದ ಪಾರು ಮಾಡಲು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ಅನಿವಾಸಿ ಕನ್ನಡಿಗರು ನಮ್ಮ ರಾಜ್ಯದ ಆಸ್ತಿ. ವಾರ್ಷಿಕ 40 ಬಿಲಿಯನ್ ಹಣ ನಮ್ಮ ಕರ್ನಾಟಕಕ್ಕೆ ಅನಿವಾಸಿ ಕನ್ನಡಿಗರ ಮೂಲಕ ನಮ್ಮ ಬ್ಯಾಂಕ್ಗಳಿಗೆ ಡಿಪಾಸಿಟ್ ಆಗುತ್ತಿದೆ. ಅವರಿಂದ ನಮ್ಮ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಸಂದಾಯವಾಗುತ್ತಿದೆ. ಅದು ನಮ್ಮ ಕನ್ನಡಿಗರ ಹೆಮ್ಮೆ ಎಂದರು.
ಅನಿವಾಸಿ ಕನ್ನಡಿಗರು ವಿದೇಶಕ್ಕೆ ಹೋಗಿ ವಾಪಸ್ ಬಂದು, ಇಲ್ಲಿ ಏನಾದರೂ ಉದ್ಯಮ ಮಾಡಲು ಬಯಸಿದರೆ ಅಥವಾ ತಾವು ಗಳಿಸಿದ ಜ್ಞಾನವನ್ನು, ಅನುಭವವನ್ನು ನಮ್ಮ ವಿಶ್ವವಿದ್ಯಾಲಯಗಳಲ್ಲಿ ಬಳಸಿಕೊಳ್ಳಲು ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಬಳಸಿಕೊಳ್ಳಲು ನಮ್ಮ ಸರ್ಕಾರ ಸಿದ್ದವಿದೆ. ನಮ್ಮ ಸಾಗರೋತ್ತರ ಕನ್ನಡಿಗರ ಮುಖಾಂತರ ಮತ್ತು ಜಗತ್ತಿನ ಎಲ್ಲ ದೇಶದಲ್ಲಿರುವ ಅನಿವಾಸಿ ಕನ್ನಡಿಗರ ಅನೇಕ ಸಂಘಟನೆಗಳ ಅಪೇಕ್ಷೆಯಂತೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಅದಕ್ಕೊಂದು ವೇದಿಕೆ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.
ವಿದೇಶದಲ್ಲಿ ಅನಿವಾಸಿ ಕನ್ನಡ ಭವನ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ನಮ್ಮ ಅನಿವಾಸಿ ಕನ್ನಡಿಗರು ಕರ್ನಾಟಕಕ್ಕೆ ಬಂದಾಗ ಅವರು ಉಳಿದುಕೊಳ್ಳಲು ಬೆಂಗಳೂರಿನಲ್ಲಿಯೂ ಕೂಡ "ಕನ್ನಡ ಭವನ" ನಿರ್ಮಿಸುವ ಯೋಜನೆಗೆ ರೂಪು ನೀಡುತ್ತೇವೆ ಎಂದು ಭರವಸೆ ನೀಡಿದರು.
ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಆದಷ್ಟು ಬೇಗ ಉಪಾಧ್ಯಕ್ಷರನ್ನು ನೇಮಕ ಮಾಡಲು ಚರ್ಚೆ ನಡೆಯುತ್ತಿದೆ. ಮಂತ್ರಿ ಮಂಡಳ ವಿಸ್ತರಣೆ ಕೂಡ ನಡೆಯುತ್ತಿದೆ. ಆದಷ್ಟು ಬೇಗ ನಮ್ಮ ಸಾಗರೋತ್ತರ ಕನ್ನಡಿಗರಿಗೆ ಮತ್ತು ಅನಿವಾಸಿ ಕನ್ನಡಿಗರಿಗೆ ಶುಭ ಸುದ್ದಿ ನೀಡುತ್ತೇವೆ. ನೀವು ಯಾವುದೇ ಮುಜುಗರವಿಲ್ಲದೆ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೂ ನಾನು ಅಧಿಕಾರದಲ್ಲಿರದಿದ್ದರೂ ಅದಕ್ಕೆ ನಾನು ಸ್ಪಂದಿಸುತ್ತೇನೆ ಎಂದು ತಿಳಿಸಿದರು.