ಬಾಗಲಕೋಟೆ: ''ಜನರ ಆಶೀರ್ವಾದ ಇಲ್ಲಎಂದಾಗಲು ಅಧಿಕಾರದ ಹಪಾಹಪಿ ಬಿಜೆಪಿಯವರಿಗೆ ಜಾಸ್ತಿಯಾಗಿದೆ'' ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಕೆಪಿಡಿ ಸಭೆ ನಡೆಸಲು ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ, ಸಿಂಗಪುರದಲ್ಲಿ ಆಪರೇಷನ್ ಸರ್ಕಾರ ಕೆಡವಲು ಯೋಚನೆ ಮಾಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ''ಬಿಜೆಪಿಯವರಿಗೆ ಜನರ ಆಶೀರ್ವಾದ ದೊರೆತಿಲ್ಲ. ಜನ ತಿರಸ್ಕರಿಸಿದರೂ ಬಿಜೆಪಿಯವರು ಅಧಿಕಾರದ ದಾಹದಿಂದ ಈ ಪ್ರಯತ್ನ ನಡೆದಿರಬಹುದು'' ಎಂದು ಹೇಳಿದರು.
''ನನಗೆ ಆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಮುಧೋಳದಲ್ಲಿದ್ದೇನೆ. ನಾನಿನ್ನೂ ಅಲ್ಲಿಯ ವಿಷಯಗಳನ್ನು ತಿಳಿದುಕೊಂಡಿಲ್ಲ'' ಎಂದ ಅವರು, ''ಬಿಜೆಪಿಗರು ಯಾವಾಗಲೂ ಅಡ್ಡದಾರಿಯ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಪ್ರಯತ್ನ ನಡೆದಿರಬಹುದು. ಆದರೆ, ಈ ಕುರಿತು ನನಗೆ ಗೊತ್ತಿಲ್ಲ'' ಎಂದು ಜಾರಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ 25 ಶಾಸಕರಿಂದ ಸಿಎಂ ದೂರು ನೀಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ''ಏನಾದರೂ ಅಡಚಣೆಗಳು ಇದ್ದರೆ ಸಿಎಂ ಹತ್ತಿರ ಹೋಗೋದು ಸಹಜ ಅಲ್ವಾ ಎಂದು ತಿಳಿಸಿದರು. ಅಂತಹ ಏನಾದರೂ ಇದ್ದರೆ ನಮ್ಮ ಸಿಎಂ ಸರಿಪಡಿಸುತ್ತಾರೆ. ಶಾಸಕರು, ಮಂತ್ರಿಗಳು ಕೆಲಸ ಮಾಡಬೇಕಾದರೆ ಏರುಪೇರುಗಳಾಗುತ್ತದೆ ಎಂದರು.
ಬಿಜೆಪಿಯವರ ಕಾಲದಲ್ಲಿ ವರ್ಗಾವಣೆ ದಂಧೆ - ಆರೋಪ: ಬಾಗಲಕೋಟೆ ಜಿಲ್ಲೆಯ ಶಾಸಕರು ಆ ರೀತಿ ಪತ್ರ ಬರೆದಿದ್ದು ಇದಿಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ನನಗೆ ಗೊತ್ತಿಲ್ಲ, ಇದ್ರೆ ನಾನು ಕರೆಸಿ ಮಾತನಾಡುತ್ತೇನೆ. ನಮ್ಮಲ್ಲಿ ಏನೂ ತೊಂದರೆ ಇಲ್ಲ'' ಎಂದರು. ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಬಿಜೆಪಿಯವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ''ಬಿಜೆಪಿಯವರ ಕಾಲದಲ್ಲಿ ವರ್ಗಾವಣೆ ದಂಧೆ ನಡೆದಿರಬಹುದು'' ಎಂದರು.
ಚಹಾದ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡಿದರೆ ಕ್ರಮ: ''ಜಿಲ್ಲೆಯಲ್ಲಿನ ಮಳೆಹಾನಿ ಬಗ್ಗೆ ಅಧಿಕಾರಿಗಳಿಗೆ ಎಲ್ಲ ಸೂಚನೆ ಕೊಟ್ಟಿದ್ದೇನೆ. ಎಲ್ಲ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ'' ಎಂದ ಅವರು, ಮದ್ಯದ ಹಾವಳಿ ಜಿಲ್ಲೆಯಲ್ಲಿ ಹದಗೆಟ್ಟಿರುವ ಬಗ್ಗೆ ಮಾತನಾಡಿ, ''ಪಾರ್ಕ್, ರಸ್ತೆ, ಶಾಲೆ ಕಟ್ಟಡಗಳಲ್ಲಿ ಮದ್ಯದ ಹಾವಳಿ ಕಂಡು ಬಂದರೆ, ಕಠಿಣ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದೇನೆ. ಚಹಾದ ಅಂಗಡಿಯಲ್ಲಿ ಚಹಾ ಮಾರುವುದು ಬಿಟ್ಟು ಮದ್ಯ ಮಾರಾಟ ಮಾಡಿದರೆ, ಕ್ರಮ ಕೈಗೊಳ್ಳುತ್ತೇವೆ'' ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಮುಗಿದಿಲ್ಲ, ಅಷ್ಟರಲ್ಲೇ ಸ್ವಪಕ್ಷದವರಿಂದ ಅಪಸ್ವರ: ಜಿ ಟಿ ದೇವೇಗೌಡ ಟೀಕೆ