ಬಾಗಲಕೋಟೆ: "ಕಾಂಗ್ರೆಸ್ನಲ್ಲಿ ಹೊರಗಿನಿಂದ ಬಂದವರು ಮತ್ತು ಮೂಲ ಕಾಂಗ್ರೆಸ್ಸಿಗರು ಎಂಬ ಎರಡು ಗುಂಪುಗಳಿವೆ. ಮೂಲ ನಿವಾಸಿಗಳು ಮತ್ತು ಅನಿವಾಸಿಗಳ ನಡುವಿನ ಹೋರಾಟದ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಸಿಲುಕಿಕೊಂಡಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಬೀಳಗಿ ತಾಲೂಕಿನ ಕೋರ್ತಿ ಗ್ರಾಮದಲ್ಲಿ ಬರ ವೀಕ್ಷಣೆಗೆ ಆಗಮಿಸಿದ್ದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಭಯ ಇದ್ದವರು ಈ ರೀತಿಯ ಹೇಳಿಕೆ ಕೊಡುತ್ತಾರೆ. ಭಯ ಇಲ್ಲ ಎಂದರೆ ಯಾಕೆ ಈ ರೀತಿಯ ಹೇಳಿಕೆ ಕೊಡಬೇಕು. ಇವರು ಯಾಕೆ ಮೇಲಿಂದ ಮೇಲೆ ನಾನೇ ಸಿಎಂ, ನಾನೇ ಸಿಎಂ ಎಂದು ಹೇಳುತ್ತಿದ್ದಾರೆ" ಎಂದು ಪ್ರಶ್ನಿಸಿದರು.
"ಅವರಿಗೆ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರು ಹೊರಗಿನವರಾಗಿದ್ದಾರೆ. ಈ ಭಾವನೆಯಿಂದ ಆತಂಕಕ್ಕೂಳಗಾಗಿದ್ದಾರೆ. ಈ ಆತಂಕದಿಂದ ಈ ರೀತಿ ಹೇಳುತ್ತಿದ್ದಾರೆ" ಎಂದರು. "ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ತಂಡಗಳಾಗಿವೆ. ಡಿ ಕೆ ಶಿವಕುಮಾರ್ ಅವರ ತಂಡ, ಸತೀಶ್ ಜಾರಕಿಹೊಳಿ ಅವರ ತಂಡ, ಸಿದ್ದರಾಮಯ್ಯ ಅವರು ತಂಡ, ಪರಮೇಶ್ವರ್ ಅವರ ತಂಡ, ಪ್ರಿಯಾಂಕ್ ಖರ್ಗೆಯವರ ತಂಡ ಇದೆ. ತಮ್ಮ ಶಕ್ತಿ ಪ್ರದರ್ಶನ ತೋರಿಸಲು ಅವರಲ್ಲಿಯೇ ಆಪರೇಷನ್ ಹಸ್ತ ನಡೆಯುತ್ತಿದೆ" ಎಂದ ಅವರು, ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ಸಿದ್ಧವಾಗಿದೆಯೇ ಎಂದು ಕೇಳಿದಾಗ, "ಮೊದಲು ಸರ್ಕಾರ ಬಿದ್ದು ಹೋಗಲಿ ಆಮೇಲೆ ನೋಡೋಣ" ಎಂದು ಉತ್ತರಿಸಿದರು.
ರಾಜ್ಯದಲ್ಲಿ ಬರ ಇದ್ದರೂ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, "ಕೇಂದ್ರ ಸರ್ಕಾರ ಈಗಾಗಲೇ ಎನ್ಡಿಆರ್ಎಫ್ ಮತ್ತು ಎಸ್ಟಿಆರ್ಎಫ್ನಡಿ 12,500 ಕೋಟಿ ರೂ ಮತ್ತು 13,500 ಕೋಟಿ ರೂ ಬಿಡುಗಡೆ ಮಾಡಿದೆ. ಎನ್ಡಿಆರ್ಎಫ್ ಹಣ ಜಿಲ್ಲಾಧಿಕಾರಿಗಳ ಕೈಯಲ್ಲಿದೆ. ಸರ್ಕಾರದಲ್ಲಿ ಹಿಂದಿನ ಹಣವೇ 900 ಕೋಟಿ ಇದೆ. ರಾಜ್ಯ ಸರ್ಕಾರ ಇನ್ನೂ ಬರ ತಾಲೂಕುಗಳನ್ನು ಪೂರ್ಣವಾಗಿ ಘೋಷಣೆ ಮಾಡಿಲ್ಲ, ಅಧ್ಯಯನ ಮಾಡಿಲ್ಲ. ಅಂದಾಜು ಪಟ್ಟಿಯನ್ನು ಸಲ್ಲಿಸಿದರೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಇವರು ತಮ್ಮ ತಪ್ಪುಗಳನ್ನು ಮರೆಮಾಚಿಕೊಳ್ಳಲು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ" ಎಂದರು.
"ರೈತರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ, ರೈತರ ಶಾಪ ಸರ್ಕಾರಕ್ಕೆ ತಟ್ಟುತ್ತದೆ ಸರ್ಕಾರ ಪತನ ಆಗುತ್ತದೆ. ಬಿಜೆಪಿ ರೈತರ ಪರ ನಿಲುವನ್ನು ತೆಗೆದುಕೊಂಡಿದೆ. ಸರ್ಕಾರ ರೈತರಿಗೆ ನ್ಯಾಯ ಕೊಡಲು ವಿಫಲ ಆದರೆ ನಾವು ಹೋರಾಟ ಮಾಡಿಯಾದರು ನ್ಯಾಯ ಕೊಡಿಸುತ್ತೇವೆ" ಎಂದು ಹೇಳಿದರು. ಈ ವೇಳೆ ಸಂಸದ ಪಿ ಸಿ ಗದ್ದಿಗೌಡರ, ಮಾಜಿ ಸಚಿವ ಮುರಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯ ಪಿ ಹೆಚ್ ಪೂಜಾರ ಮತ್ತಿತರರು ಉಪಸ್ಥಿತಿರಿದ್ದರು.
ಇದನ್ನೂ ಓದಿ: ಕೈ ಅಸಮಾಧಾನಿತ ಶಾಸಕರು ಹೈಕಮಾಂಡ್ ಟಚ್‌ನಲ್ಲಿದ್ದಾರೆ: ಸರ್ಕಾರದ ಪತನದ ಬಗ್ಗೆ ಭವಿಷ್ಯ ನುಡಿದ ನಿರಾಣಿ